Belagavi

ಎಸ್.ಐ.ಆರ್ ಎನ್ಯುಮರೇಷನ್ ಫಾರ್ಮ್ ಪಡೆಯಲು ಇನ್ನು ಕೇವಲ ನಾಲ್ಕು ದಿನಗಳ ಕಾಲಾವಕಾಶ; ಡಿಸಿ ಮೊಹ್ಮದ್ ರೋಷನ್

Share

ಬೆಳಗಾವಿ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಮ್ಯಾಪಿಂಗ್ ಹಾಗೂ ಪರಿಶೀಲನೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಸಾರ್ವಜನಿಕರು ಆನ್‌ಲೈನ್ ಮೂಲಕ ಪರಿಶೀಲಿಸಲು ಜಿಲ್ಲಾಧಿಕಾರಿ ಮಹಮ್ಮದ್ ರೋಷನ್ ಮನವಿ ಮಾಡಿದ್ದಾರೆ. ಬಿಎಲ್‌ಒಗಳನ್ನು ತಕ್ಷಣ ಸಂಪರ್ಕಿಸಿ ಎನ್ಯುಮರೇಷನ್ ಫಾರ್ಮ್ ಪಡೆಯಲು ಇನ್ನು ನಾಲ್ಕು ದಿನಗಳ ಕಾಲಾವಕಾಶ ನೀಡಲಾಗಿದೆ.

ಇಂದು ಬೆಳಗಾವಿಯಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಮಹಮ್ಮದ್ ರೋಷನ್ ಅವರು, ಚುನಾವಣಾ ಆಯೋಗದ (ECI) ವೆಬ್‌ಸೈಟ್‌ನಲ್ಲಿ ಮತದಾರರ ಪಟ್ಟಿ ಮ್ಯಾಪಿಂಗ್ ಹಾಗೂ ಪರಿಶೀಲನೆ ನಡೆಸುವ ಸರಳ ಆನ್‌ಲೈನ್ ಪ್ರಕ್ರಿಯೆಯ ಕುರಿತು ವಿವರಣೆ ನೀಡಿದರು. ಸಾರ್ವಜನಿಕರು 2002ರ ಮತದಾರರ ಪಟ್ಟಿಯ ಆಧಾರದಲ್ಲಿ ತಮ್ಮ ಹೆಸರು, ಮ್ಯಾಪಿಂಗ್ ಹಾಗೂ ಮತಗಟ್ಟೆ ವಿವರಗಳನ್ನು ಪರಿಶೀಲಿಸಿ ಆನ್‌ಲೈನ್ ನಮೂನೆ ಭರ್ತಿ ಮಾಡಬಹುದು. ಒಂದು ವೇಳೆ ಪಟ್ಟಿಯಲ್ಲಿ ಹೆಸರು ಲಭ್ಯವಿಲ್ಲದಿದ್ದರೆ, ಪೋಷಕರು ಅಥವಾ ರಕ್ತಸಂಬಂಧಿಗಳ ವಿವರಗಳನ್ನು ನಮೂದಿಸಿ ಡಿಜಿಟಲ್ ಸಹಿಯೊಂದಿಗೆ ಅಪ್‌ಲೋಡ್ ಮಾಡಬೇಕು. ಇವುಗಳನ್ನು ಬಿಎಲ್‌ಒ ಮತ್ತು ಇಆರ್‌ಒ ಹಂತದಲ್ಲಿ ಪರಿಶೀಲಿಸಲಾಗುತ್ತಿದ್ದು, ಬೆಂಗಳೂರು, ಮುಂಬೈ, ಗೋವಾ ಹಾಗೂ ವಿದೇಶಗಳಲ್ಲಿರುವ ಭಾರತೀಯರೂ ಈ ಸೌಲಭ್ಯ ಬಳಸಿಕೊಳ್ಳಬಹುದು ಎಂದು ತಿಳಿಸಿದರು.

ಕಳೆದ 25 ದಿನಗಳಿಂದ ಬಿಎಲ್‌ಒಗಳು ಮನೆ ಮನೆಗೆ ತೆರಳಿ ಜಿಲ್ಲೆಯ ಒಟ್ಟು 41,07,000 ಮತದಾರರಿಗೆ 100% ಎನ್ಯುಮರೇಷನ್ ಫಾರ್ಮ್‌ಗಳನ್ನು ವಿತರಿಸಿದ್ದಾರೆ. ಆದರೆ, ಬೆಳಗಾವಿ ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಕಳೆದ 10-15 ವರ್ಷಗಳಿಂದ ಸಮರ್ಪಕ ರ್ಯಾ ಷನಲೈಜೇಷನ್ ಆಗದಿರುವುದರಿಂದ ಒಂದೇ ಕುಟುಂಬದ ಸದಸ್ಯರು ಬೇರೆ ಬೇರೆ ಪೋಲಿಂಗ್ ಬೂತ್‌ಗಳಲ್ಲಿ ಹಂಚಿಹೋಗಿರುವ ಸಮಸ್ಯೆ ಕಂಡುಬಂದಿದೆ. ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಬಿಎಲ್‌ಎಗಳ ಸಲಹೆಯಂತೆ ಪ್ರತಿಯೊಂದು ಬೂತ್‌ನಲ್ಲಿ 50 ರಿಂದ 150 ಮತದಾರರನ್ನು ‘ಅನ್‌ಕಲೆಕ್ಟೆಬಲ್’ ಪಟ್ಟಿಗೆ ಸೇರಿಸದೆ ಕಾಯ್ದಿರಿಸಲಾಗಿದೆ.

ಸಾರ್ವಜನಿಕರು ಹಾಗೂ ಮತದಾರರು ತಮ್ಮ ಮೂಲ ಮತದಾರರ ಪಟ್ಟಿ ಇರುವ ಪೋಲಿಂಗ್ ಬೂತ್ ಬಿಎಲ್‌ಒ ಅವರನ್ನು ತಕ್ಷಣ ಸಂಪರ್ಕಿಸಿ ಎನ್ಯುಮರೇಷನ್ ಫಾರ್ಮ್ ಪಡೆದುಕೊಳ್ಳಬೇಕು. ಮತದಾರರು ‘ಗೈರುಹಾಜರಿ, ಸ್ಥಳಾಂತರ, ಮರಣ ಅಥವಾ ನಕಲಿ’ (ASDD) ಕೆಟಗರಿಯಲ್ಲಿ ಸೇರ್ಪಡೆಯಾಗುವುದನ್ನು ತಪ್ಪಿಸಿಕೊಳ್ಳಲು ಇನ್ನು 4 ದಿನಗಳ ಕಾಲ ಮಾತ್ರ ಕಾಲಾವಕಾಶ ನೀಡಲಾಗಿದೆ. ತದನಂತರ ಕಾನೂನಾತ್ಮಕವಾಗಿ ಅವರನ್ನು ASDD ಕೆಟಗರಿಗೆ ಸೇರಿಸುವುದು ಅನಿವಾರ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದ್ದಾರೆ.

Tags:

error: Content is protected !!