ವಿಜಯಪುರ; ಯುವಕರ ನ್ಯಾಯಯುತ ಹೋರಾಟವನ್ನು ಗೌರವಿಸಿ ಅವರ ನ್ಯಾಯಸಮ್ಮತವಾದ ಬೇಡಿಕೆಗಳನ್ನು ಈಡೇರಿಸಬೇಕಾದದ್ದು ಸರಕಾರದ ನೈತಿಕ ಜವಾಬ್ದಾರಿಯಾಗಿದೆ. ಯುವಕರ ನ್ಯಾಯಯುತವಾದ ಬೇಡಿಕೆಗಳನ್ನು ಹತ್ತಿಕ್ಕುವ ಪ್ರಜಾಪ್ರಭುತ್ವ ವಿರೋಧಿ ನಿಲುವು ತಳೆದಿರುವ ಕೇಂದ್ರ ಸರಕಾರದ ವರ್ತನೆ ನಿಜಕ್ಕೂ ಅಪಾಯಕಾರಿ ಮತ್ತು ಆತ್ಮಹತ್ಯಾದಾಯಕ ಬೆಳವಣಿಗೆಯಾಗಿದೆ ಎಂದು ಕರ್ನಾಟಕ ರಾಜ್ಯ ಬಾಲವಿಕಾಸ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ” ಅನ್ಯಾಯವನ್ನು ಪ್ರತಿಭಟಿಸುವುದು ಪ್ರತಿಯೊಬ್ಬ ಭಾರತೀಯ ನಾಗರಿಕನ ಹಕ್ಕಾಗಿದೆ. ನೀಟ್ ಪರೀಕ್ಷೆಯಲ್ಲಿ ಆಗಿರುವ ಅವಾಂತರದಿಂದ ಹಲವಾರು ಜನ ಯುವಕ ಯುವತಿಯರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.

ಇದಕ್ಕೆ ಉತ್ತರಿಸಬೇಕಾದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ ಎಲ್ಲಿ ಅಡಗಿ ಕುಳಿತಿದ್ದಾರೆ.ಸರಕಾರಕ್ಕೆ ನೈತಿಕತೆ ಇದ್ದರೆ ತಕ್ಷಣ ಅವರ ರಾಜೀನಾಮೆ ಪಡೆದುಕೊಂಡು,ಪ್ರಧಾನ ಮಂತ್ರಿಗಳು ದೇಶದ ಯುವಕರ ಭವಿಷ್ಯದ ಜೊತೆ ಚಲ್ಲಾಟವಾಡಿದ್ದಕ್ಕೆ ದೇಶದ ಯುವಕರ ಮತ್ತು ಸಮಸ್ತ ದೇಶದ ಜನತೆಯ ಕ್ಷಮೆಯಾಚಿಸಬೇಕು.ಬಾಳಿ ಬೆಳಗಬೇಕಾಗಿದ್ದ ಹಲವಾರು ಪ್ರತಿಭಾವಂತ ಯುವಕ ಯುವತಿಯರ ಸಾವಿಗೆ ಕಾರಣರಾದವರನ್ನು ತಕ್ಷಣ ಭಂದಿಸಿ, ದೇಶದ ಯುವಕರಿಗೆ ನ್ಯಾಯವದಗಿಸಿ ಕೊಡಬೇಕು ಎಂದು ಸಂಗಮೇಶ ಬಬಲೇಶ್ವರ ಆಗ್ರಹಿಸಿದ್ದಾರೆ
