ದೆಹಲಿಯಲ್ಲಿ ನೀಟ್ ವಿದ್ಯಾರ್ಥಿಗಳ ಪ್ರತಿಭಟನೆ ಹಾಗೂ ಅವರ ಮೇಲಿನ ಲಾಠಿಚಾರ್ಜ್ ಕುರಿತು ಸಂಸತ್ತಿನಲ್ಲಿ ಧ್ವನಿ ಎತ್ತಿದಾಗ ತಮ್ಮ ಮೈಕ್ ಆಫ್ ಮಾಡಲಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚರ್ಚೆಗೆ ಅವಕಾಶವೇ ಇಲ್ಲವೇ ಎಂದು ಪ್ರಶ್ನಿಸಿರುವ ಅವರು, ಕೇಂದ್ರ ಸರ್ಕಾರ ಪ್ರಜಾಪ್ರಭುತ್ವವನ್ನು ಸಂಪೂರ್ಣವಾಗಿ ಮುಗಿಸಲು ಹೊರಟಿದೆ ಎಂದು ದೆಹಲಿಯಲ್ಲಿ ವಾಗ್ದಾಳಿ ನಡೆಸಿದ್ದಾರೆ
ದೆಹಲಿಯ ಸಂಸತ್ ಅಧಿವೇಶನದಲ್ಲಿ ನಡೆದ ಘಟನೆ ಕುರಿತು ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯಕ್ಕಾಗಿ ಧ್ವನಿ ಎತ್ತುತ್ತಿದ್ದರೆ, ಅವರ ಮೇಲಿನ ದೌರ್ಜನ್ಯದ ಬಗ್ಗೆ ಸರ್ಕಾರ ಉತ್ತರಿಸುತ್ತಿಲ್ಲ ಎಂದು ಕಿಡಿಕಾರಿದರು. ಜೆ.ಪಿ. ನಡ್ಡಾ ಅವರೊಂದಿಗೆ ನಡೆದ ಚರ್ಚೆಯನ್ನು ಬಹಿರಂಗಪಡಿಸಬೇಕು ಹಾಗೂ ನೀಟ್ ಅಕ್ರಮ ಮತ್ತು ಲಾಠಿಚಾರ್ಜ್ ಸಂಬಂಧ ಗೃಹ ಸಚಿವರು ಕೈಗೊಂಡ ಕ್ರಮಗಳ ಬಗ್ಗೆ ಇಡೀ ದೇಶಕ್ಕೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು. ಕೇಂದ್ರ ಸರ್ಕಾರ ಸ್ವತಃ ಅಜಾಗರೂಕತೆ ನಿರ್ಮಿಸುತ್ತಿದ್ದು, ಸಂಸತ್ ಭವನದಲ್ಲೇ ಸಂಸದರಿಗೆ ಸುರಕ್ಷತೆ ಇಲ್ಲದ ವಾತಾವರಣ ನಿರ್ಮಾಣವಾಗಿದೆ ಎಂದು ದೂರಿದರು.

ತಮ್ಮ ಸುದೀರ್ಘ ರಾಜಕೀಯ ಜೀವನವನ್ನು ಉಲ್ಲೇಖಿಸಿದ ಖರ್ಗೆ, “ನನ್ನ 60 ವರ್ಷದ ರಾಜಕೀಯ ಜೀವನದಲ್ಲಿ 14 ಬಾರಿ ಜನಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ್ದೇನೆ. ಆದರೆ, ಇಂತಹ ಪರಿಸ್ಥಿತಿಯನ್ನು ನಾನು ಎಲ್ಲೂ ನೋಡಿಲ್ಲ. ಕೇಂದ್ರ ಸರ್ಕಾರ ಯುವಕರ ಪರವಾಗಿದೆ ಎಂದಾದರೆ ಅವರ ಮೇಲೆ ಲಾಠಿಚಾರ್ಜ್ ಮತ್ತು ಹಲ್ಲೆ ನಡೆಸಿದ್ದೇಕೆ?” ಎಂದು ನೇರವಾಗಿ ಪ್ರಶ್ನಿಸಿದರು. ಸರ್ಕಾರದ ಈ ಬೆದರಿಕೆ ಹಾಗೂ ದಬ್ಬಾಳಿಕೆಯ ನೀತಿಗೆ ಯಾರೂ ಹೆದರುವುದಿಲ್ಲ, ವಿದ್ಯಾರ್ಥಿಗಳು ಮತ್ತು ಯುವಕರ ಪರವಾಗಿ ಎಲ್ಲರೂ ಒಗ್ಗಟ್ಟಾಗಿ ಗಟ್ಟಿಯಾಗಿ ಧ್ವನಿ ಎತ್ತಲಿದ್ದೇವೆ ಎಂದು ಖರ್ಗೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
