ಒತ್ತುವರಿ ತೆರವು ಕಾರ್ಯಾಚರಣೆಗೆ ತೆರಳಿದ್ದ ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲೆ ಬೀದಿಬದಿ ವ್ಯಾಪಾರಿಗಳು ಮತ್ತು ಸಂಘಟನೆಗಳ ಸದಸ್ಯರು ಅಮಾನವೀಯವಾಗಿ ಹಲ್ಲೆ ನಡೆಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಮಹಿಳಾ ಎಂಜಿನಿಯರ್ಗಳ ಮೇಲೆಯೂ ಪೆಪ್ಪರ್ ಸ್ಪ್ರೇ ಸಿಂಪಡಿಸಿ ದೌರ್ಜನ್ಯ ಎಸಗಲಾಗಿದ್ದು, ತಪ್ಪಿತಸ್ಥರ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ಸಿಬ್ಬಂದಿಗೆ ಸೂಕ್ತ ಪೊಲೀಸ್ ಭದ್ರತೆ ಒದಗಿಸುವಂತೆ ಪಾಲಿಕೆ ಸಿಬ್ಬಂದಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.”

ದಿನಾಂಕ 21-07-2026 ರಂದು ಬೆಳಗಾವಿಯ ಛತ್ರಪತಿ ಶಿವಾಜಿ ನಗರದ ಬಸ್ ನಿಲ್ದಾಣದ ಸಮೀಪ ಸಾರ್ವಜನಿಕರ ಸುಗಮ ಓಡಾಟಕ್ಕಾಗಿ ಪಾದಚಾರಿ ಮಾರ್ಗದ ಒತ್ತುವರಿ ತೆರವುಗೊಳಿಸಲು ತೆರಳಿದ್ದ ಕೇಂದ್ರ ನಗರ ಪಾಲಿಕೆಯ ಇಬ್ಬರು ಮಹಿಳಾ ಎಂಜಿನಿಯರ್ಗಳು, ಜೆಸಿಬಿ ಚಾಲಕ ಹಾಗೂ ಟ್ರ್ಯಾಕ್ಟರ್ ಸಹಾಯಕರ ಮೇಲೆ ಬೀದಿಬದಿ ವ್ಯಾಪಾರಿಗಳು ಮತ್ತು ಸಂಘಟನೆಯ ಸದಸ್ಯರು ದಿಢೀರ್ ದಾಳಿ ನಡೆಸಿದ್ದಾರೆ. ಕಾರ್ಯಾಚರಣೆ ವೇಳೆ ಪಾಲಿಕೆ ಸಿಬ್ಬಂದಿಯ ಕೆನ್ನೆಗೆ ಹೊಡೆದು, ತಳ್ಳಿ, ಹೆಲ್ಮೆಟ್, ಪ್ಲಾಸ್ಟಿಕ್ ಕುರ್ಚಿ ಹಾಗೂ ಇತರ ವಸ್ತುಗಳಿಂದ ಭೀಕರವಾಗಿ ಹಲ್ಲೆ ನಡೆಸಲಾಗಿದೆ. ಅಷ್ಟೇ ಅಲ್ಲದೆ, ಮಹಿಳಾ ಸಿಬ್ಬಂದಿಯ ಮೇಲೆ ಪೆಪ್ಪರ್ ಸ್ಪ್ರೇ ಸಿಂಪಡಿಸಿ ಅಮಾನವೀಯವಾಗಿ ವರ್ತಿಸಲಾಗಿದೆ. ಈ ಕೃತ್ಯವನ್ನು ಖಂಡಿಸಿರುವ ಬೆಳಗಾವಿ ಮಹಾನಗರ ಪಾಲಿಕೆಯ ಸಮಸ್ತ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು, ಹಲ್ಲೆಕೋರರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಮತ್ತು ಇನ್ಮುಂದೆ ರಾಜ್ಯದ ಯಾವುದೇ ಪಾಲಿಕೆಯಿಂದ ತೆರವು ಕಾರ್ಯಾಚರಣೆ ನಡೆಸುವ ಮುನ್ನ ಕಡ್ಡಾಯವಾಗಿ ಸೂಕ್ತ ಪೊಲೀಸ್ ಭದ್ರತೆ ಒದಗಿಸಬೇಕು ಎಂದು ನಗರಾಭಿವೃದ್ಧಿ ಇಲಾಖೆಯ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಈ ವೇಳೆ ಯಲ್ಲೇಶ್ ಬಚ್ಚಲಪುರಿ, ಶ್ರೀಕಾಂತ್, ಸಾಗರ್ ಕಾಂಬಳೆ, ಭಾರತ್ ಕೋಲಕಾರ್ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ದರು.
