ಬೆಳಗಾವಿ ಮಹಾನಗರ ಪಾಲಿಕೆಯ ಇ-ಜನ್ಮ ನೋಂದಣಿ ವಿಭಾಗದಲ್ಲಿ ಸಾರ್ವಜನಿಕರ ಪರದಾಟ ಮಿತಿಮೀರಿದೆ. ಜನನ-ಮರಣ ಪ್ರಮಾಣಪತ್ರಗಳಿಗಾಗಿ ಅರ್ಜಿ ಸಲ್ಲಿಸಿ ವಾರಗಟ್ಟಲೆ ಅಲೆದರೂ ಸಿಬ್ಬಂದಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬ ಆಕ್ರೋಶ ಕೇಳಿಬಂದಿದೆ. ಸಾಲದಾಗಿ, ಸಾರ್ವಜನಿಕರಿಗೆ ಸಿಗದ ಪ್ರಮಾಣಪತ್ರಗಳು ಮಧ್ಯವರ್ತಿಗಳಿಗೆ ಕೇವಲ ಎರಡೇ ದಿನದಲ್ಲಿ ಸಿಗುತ್ತಿವೆ ಎಂದು ನಗರಸೇವಕರೇ ಗಂಭೀರ ಆರೋಪ ಮಾಡಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆಯ ಇ-ಜನ್ಮ ನೋಂದಣಿ ವಿಭಾಗದಲ್ಲಿ ಜನನ ಮತ್ತು ಮರಣ ಪ್ರಮಾಣಪತ್ರಗಳನ್ನು ಪಡೆಯಲು ಸಾರ್ವಜನಿಕರು ತೀವ್ರ ಪರದಾಡುವಂತಾಗಿದೆ. ಅರ್ಜಿ ಸಲ್ಲಿಸಿ 20 ರಿಂದ 25 ದಿನಗಳು ಕಳೆದರೂ ಪ್ರಮಾಣಪತ್ರ ನೀಡದೆ ಸಿಬ್ಬಂದಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳದಲ್ಲಿ ಇರುವುದಿಲ್ಲ ಹಾಗೂ ‘ನಾಳೆ ಬನ್ನಿ, ನಾಡಿದ್ದು ಬನ್ನಿ’ ಎಂದು ನೆಪ ಹೇಳಿ ದಿನಕ್ಕೊಂದು ಕಾರಣ ನೀಡುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ಬಾಳೆಕುಂದ್ರಿ , ಸಾಂಬ್ರಾ ಸೇರಿದಂತೆ ದೂರದ ಊರುಗಳಿಂದ ಆಗಮಿಸುವ ಜನರು ಹಾಗೂ 82 ವರ್ಷದ ವೃದ್ಧರು ಕೂಡ ಈ ಕಚೇರಿಯ ಮುಂದೆ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಆಸ್ಪತ್ರೆಯ ಸೂಕ್ತ ದಾಖಲೆಗಳು ಮತ್ತು ಅರ್ಜಿಗಳನ್ನು ಸಲ್ಲಿಸಿದ್ದರೂ ಸಹ ಅಧಿಕಾರಿಗಳು ಕನಿಷ್ಠ ಸ್ಪಂದನೆ ನೀಡುತ್ತಿಲ್ಲ. ತಮ್ಮ ಕೆಲಸ-ಕಾರ್ಯಗಳನ್ನು ಬಿಟ್ಟು ದಿನವೂ ಪಾಲಿಕೆಗೆ ಅಲೆಯುವಂತಾಗಿದ್ದು, ಸಂಬಂಧಪಟ್ಟ ಮೇಲಧಿಕಾರಿಗಳು ತಕ್ಷಣವೇ ಮಧ್ಯಪ್ರವೇಶಿಸಿ ಈ ಸಮಸ್ಯೆಯನ್ನು ಬಗೆಹರಿಸಿ ಪ್ರಮಾಣಪತ್ರಗಳನ್ನು ವಿತರಿಸಬೇಕೆಂದು ಸಂತ್ರಸ್ತ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಬೆಳಗಾವಿ ಮಹಾನಗರ ಪಾಲಿಕೆಯ ಇ-ಜನ್ಮ ನೋಂದಣಿ ವಿಭಾಗದಲ್ಲಿ ಸಣ್ಣಪುಟ್ಟ ತಿದ್ದುಪಡಿಗಳಿಗೂ ಸಾರ್ವಜನಿಕರನ್ನು ಕೋರ್ಟ್‌ಗೆ ಅಲೆಯುವಂತೆ ಮಾಡಲಾಗುತ್ತಿದೆ ಎಂದು ವಿಪಕ್ಷದ ನಗರಸೇವಕ ಮುಜಮ್ಮಿಲ್ ಡೊಣಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾಲಿಕೆಯ ಜನಪ್ರತಿನಿಧಿಗಳು ಅಥವಾ ಸಾಮಾಜಿಕ ಕಾರ್ಯಕರ್ತರು ಮನವಿ ಮಾಡಿದರೆ ಕೆಲಸ ಮಾಡದ ಸಿಬ್ಬಂದಿ, ಅದೇ ಕೆಲಸಕ್ಕೆ ಮಧ್ಯವರ್ತಿಗಳು (ಏಜೆಂಟರು) ಹೋದರೆ ಕೇವಲ ಎರಡೇ ದಿನಗಳಲ್ಲಿ ಮಾಡಿಕೊಡುತ್ತಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದರು. ಪ್ರತಿಯೊಬ್ಬರಿಗೂ ಕಾನೂನು ಒಂದೇ ಆಗಿರಬೇಕು. ಮಧ್ಯವರ್ತಿಗಳ ಹಾವಳಿಯನ್ನು ತಡೆದು ಸಾರ್ವಜನಿಕರ ಸಮಸ್ಯೆಯನ್ನು ತಕ್ಷಣ ಬಗೆಹರಿಸಲು ನಮ್ಮ ತಂಡವು ಶೀಘ್ರದಲ್ಲೇ ಮಹಾಪೌರರ ಜೊತೆ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಅವರು ಭರವಸೆ ನೀಡಿದರು.
