Belagavi

ಲಯನ್ಸ್ ಕ್ಲಬ್ ಜಿಲ್ಲಾ 317B ಕ್ಯಾಬಿನೆಟ್ ಪದಗ್ರಹಣ: ಸೇವಾ ಮನೋಭಾವನೆಗೆ ಕರೆ ನೀಡಿದ ವಿನಯ್ ಮಿತ್ತಲ್

Share

ಲಯನ್ಸ್ ಕ್ಲಬ್ ಜಾಗತಿಕ ಮಟ್ಟದಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನೆರವಾಗುವ ಮೂಲಕ ಸಮಾಜಮುಖಿ ಸೇವೆಗೆ ಹೆಸರಾಗಿದೆ ಎಂದು ದೆಹಲಿಯ ಅಂತರರಾಷ್ಟ್ರೀಯ ನಿರ್ದೇಶಕ ಲಯನ್ ವಿನಯ್ ಮಿತ್ತಲ್ ತಿಳಿಸಿದರು.

ಬೆಳಗಾವಿಯ ಸೀನಿಯರ್ ಲಯನ್ಸ್ ಕ್ಲಬ್ ಆತಿಥ್ಯದಲ್ಲಿ ಜಿಲ್ಲಾ 317B ರ ಜಿಲ್ಲಾ ಕ್ಯಾಬಿನೆಟ್ ಪದಗ್ರಹಣ ಸಮಾರಂಭವು ಅತ್ಯಂತ ಅದ್ಧೂರಿಯಾಗಿ ನೆರವೇರಿತು. ದೆಹಲಿಯ ಅಂತರರಾಷ್ಟ್ರೀಯ ನಿರ್ದೇಶಕ ಲಯನ್ ವಿನಯ್ ಮಿತ್ತಲ್ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಹಾಂಗ್‌ಕಾಂಗ್ ಅಂತರರಾಷ್ಟ್ರೀಯ ಸಮಾವೇಶದಲ್ಲಿ ಅಧಿಕಾರ ಸ್ವೀಕರಿಸಿದ್ದ ಜಿಲ್ಲಾ ಗವರ್ನರ್ ಲಯನ್ ರಾಜಶೇಖರ ಹಿರೇಮಠ ಅವರು ಈ ಭವ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ದಿಕ್ಸೂಚಿ ಭಾಷಣ ಮಾಡಿದ ಲಯನ್ ವಿನಯ್ ಮಿತ್ತಲ್ ಅವರು, ವಿಶ್ವದ 210ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಲಯನ್ಸ್ ಕ್ಲಬ್‌ಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನೆರವಾಗುವ ಮೂಲಕ ಸಮಾಜಮುಖಿ ಸೇವೆಗೆ ಜಾಗತಿಕ ಮಟ್ಟದಲ್ಲಿ ಹೆಸರಾಗಿವೆ ಎಂದರು. ಬೆಳಗಾವಿಯ ನಾಲ್ಕು ಲಯನ್ಸ್ ಕ್ಲಬ್‌ಗಳು ಅನ್ನದಾಸೋಹ, ಉಚಿತ ನೇತ್ರ ತಪಾಸಣೆ, ಶಸ್ತ್ರಚಿಕಿತ್ಸೆ ಶಿಬಿರಗಳು ಹಾಗೂ ಕುಡಿಯುವ ನೀರಿನ ಯೋಜನೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವುದನ್ನು ಅವರು ಶ್ಲಾಘಿಸಿದರು. ಇದರ ಭಾಗವಾಗಿ ಕಳೆದ ವರ್ಷ ಕ್ಯಾಂಟೋನ್ಮೆಂಟ್ ಪ್ರದೇಶದ ಶತಮಾನ ಹಳೆಯ ಬಾವಿಯನ್ನು ₹2 ಲಕ್ಷ ವೆಚ್ಚದಲ್ಲಿ ಪುನಶ್ಚೇತನಗೊಳಿಸಿ 200 ಕುಟುಂಬಗಳಿಗೆ ನೀರು ಒದಗಿಸಿರುವುದನ್ನು ಸ್ಮರಿಸಿದ ಅವರು, ಇದೇ ಮಾದರಿಯಲ್ಲಿ ನೂತನ ಪದಾಧಿಕಾರಿಗಳು ಸೇವಾ ಮನೋಭಾವನೆಯನ್ನು ಮುಂದುವರಿಸಬೇಕು ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಮಲ್ಟಿಪಲ್ ಡಿಸ್ಟ್ರಿಕ್ಟ್ 317 ವತಿಯಿಂದ ಜಿಲ್ಲೆಯಾದ್ಯಂತ ರಕ್ತಸಂಗ್ರಹ ಸೇವೆಗಾಗಿ ಅತ್ಯಾಧುನಿಕ ಸುಸಜ್ಜಿತ ಮೊಬೈಲ್ ರಕ್ತದಾನ ಘಟಕವನ್ನು ಹಸ್ತಾಂತರಿಸಲಾಯಿತು. ಕರ್ನಾಟಕ ಮತ್ತು ಗೋವಾ ರಾಜ್ಯಗಳ ವ್ಯಾಪ್ತಿಯ 114 ಲಯನ್ಸ್ ಕ್ಲಬ್‌ಗಳು ಹಾಗೂ 26 ಲಿಯೋ ಕ್ಲಬ್‌ಗಳ ಪ್ರತಿನಿಧಿಗಳು ಸೇರಿದಂತೆ 1,000ಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿದ್ದ ಈ ಸಮಾರಂಭದಲ್ಲಿ ಮಾಜಿ ಅಂತರರಾಷ್ಟ್ರೀಯ ನಿರ್ದೇಶಕರು, ವಿವಿಧ ಜಿಲ್ಲೆಗಳ ಗವರ್ನರ್‌ಗಳು ಹಾಗೂ 25 ಮಾಜಿ ಜಿಲ್ಲಾ ಗವರ್ನರ್‌ಗಳು ಉಪಸ್ಥಿತರಿದ್ದರು. ಲಯನ್ ಶ್ರೀಧರ ಉಪ್ಪಿನ್ ಅವರ ನೇತೃತ್ವದಲ್ಲಿ ಬೆಳಗಾವಿ ಹಾಗೂ ಖಾನಾಪುರದ ಲಯನ್ಸ್ ಕ್ಲಬ್ ಸದಸ್ಯರು ಕಾರ್ಯಕ್ರಮದ ಪೂರ್ವ ಸಿದ್ಧತೆಗಳನ್ನು ಅಚ್ಚುಕಟ್ಟಾಗಿ ಮಾಡಿದ್ದರು. ಇಡೀ ಕಾರ್ಯಕ್ರಮದ ಅಭೂತಪೂರ್ವ ಯಶಸ್ಸಿಗಾಗಿ ಜಿಲ್ಲಾ ಗವರ್ನರ್ ಲಯನ್ ರಾಜಶೇಖರ ಹಿರೇಮಠ ಅವರೊಂದಿಗೆ ಪ್ರಮುಖರಾದ ಲಯನ್ ಶ್ರೀನಿವಾಸ್ ಶಿವಾಂಗಿ, ಲಯನ್ ಮೋನಿಕಾ ಸಾವಂತ್, ಲಯನ್ ಸತೀಶ್ ಪಾಟೀಲ, ಲಯನ್ ಅಶೋಕ್ ಕಟವೆ, ಲಯನ್ ಹೇಮಂತ ಕಿತ್ತೂರು ಹಾಗೂ ಲಯನ್ ದಿನೇಶ್ ಭಿರ್ಡೆ ಸೇರಿದಂತೆ ಹಲವು ಗಣ್ಯರು ಶ್ರಮಿಸಿದರು.

Tags:

error: Content is protected !!