Belagavi

ಬೆಳಗಾವಿ ಜ್ಯುವೆಲ್ಲರಿ ಶಾಪ್ ಕಳ್ಳತನ ಪ್ರಕರಣಕ್ಕೆ ಸ್ಫೋಟಕ ತಿರುವು

Share

ಬೆಳಗಾವಿ ನಗರದ ರಾಮದೇವ ಗಲ್ಲಿಯಲ್ಲಿರುವ ವಿ.ಪಿ. ವೇರ್ಣೇಕರ ಮತ್ತು ಸನ್ಸ್ ಚಿನ್ನಾಭರಣ ಅಂಗಡಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪೋಟಕ ತಿರುವು ಸಿಕ್ಕಿದ್ದು, ಪ್ರಕರಣ ದಾಖಲಿಸಿದ್ದ ದೂರುದಾರನೇ ಕಳ್ಳತನ ನಡೆಸಿರುವ ಘಟನೆ ನಡೆದಿದೆ. ಬೇಲಿಯೇ ಎದ್ದು ಹೊಲ ಮೇಯಿತೇ??? ಎಂಬಂತಾಗಿದೆ.

ಟಿಳಕವಾಡಿಯ ಸಾವರಕರ ರಸ್ತೆಯ ನಿವಾಸಿ ಕೃಷ್ಣಾನಂದ ವಿಶ್ವನಾಥ ವೇರ್ಣೆಕರ ಜು. 17ರಂದು ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಜು. 16ರ ರಾತ್ರಿ ಅಪರಿಚಿತರು ಅಂಗಡಿಯ ಬಾಗಿಲು ಮುರಿದು ಚಿನ್ನ, ಬೆಳ್ಳಿ ಆಭರಣಗಳು ಹಾಗೂ ನಗದು ಹಣ ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ಆರೋಪಿಸಿದ್ದರು. ಪ್ರಕರಣದ ತನಿಖೆ ಕೈಗೊಂಡ ಖಡೇಬಜಾರ್ ಠಾಣೆ ಪೊಲೀಸರು ಸ್ಥಳ ಪರಿಶೀಲನೆ, ತಾಂತ್ರಿಕ ಮಾಹಿತಿ ಹಾಗೂ ಇತರೆ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದಾಗ ದೂರುದಾರನ ಮೇಲೆಯೇ ಅನುಮಾನ ವ್ಯಕ್ತವಾಯಿತು. ಬಳಿಕ ಕೃಷ್ಣಾನಂದ ವೇರ್ಣೆಕರ ವಿಚಾರಣೆಗೆ ಒಳಪಡಿಸಿದಾಗ, ಅಂಗಡಿಯಲ್ಲಿದ್ದ ಚಿನ್ನ, ಬೆಳ್ಳಿ ಆಭರಣಗಳು ಹಾಗೂ ನಗದು ಹಣವನ್ನು ತಾನೇ ತೆಗೆದುಕೊಂಡು ತನ್ನ ಆ್ಯಕ್ಟಿವಾ ಸ್ಕೂಟಿಯ ಡಿಕ್ಕಿಯಲ್ಲಿ ಸಾಗಿಸಿರುವುದಾಗಿ ಒಪ್ಪಿಕೊಂಡಿದ್ದಾನೆ.
ಆರೋಪಿಯಿಂದ 45 ಸಾವಿರ ಮೌಲ್ಯದ ಆ್ಯಕ್ಟಿವಾ ಸ್ಕೂಟಿ, 62,60,990 ಮೌಲ್ಯದ 519.8 ಗ್ರಾಂ ಚಿನ್ನಾಭರಣ, 6 ಸಾವಿರ ಮೌಲ್ಯದ 31 ಗ್ರಾಂ ಬೆಳ್ಳಿ ಆಭರಣ ಹಾಗೂ 2,83,010 ನಗದು ಸೇರಿ ಒಟ್ಟು 65,95,000 ಮೌಲ್ಯದ ಸ್ವತ್ತನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.

ದೂರುದಾರನೇ ಪ್ರಕರಣದಲ್ಲಿ ಭಾಗಿಯಾಗಿರುವುದು ತನಿಖೆಯಲ್ಲಿ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಆತನ ವಿರುದ್ಧ ಕಾನೂನು ಕ್ರಮ ಮುಂದುವರಿಸಲಾಗಿದ್ದು, ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಭೂಷಣ್ ‌ಬೋರಸೆ ತಿಳಿಸಿದ್ದಾರೆ. ಪ್ರಕರಣ ಪತ್ತೆ ಹಚ್ಚಿದ ಖಡೇಬಜಾರ್ ಪೊಲೀಸ ಸಿಬ್ಬಂದಿಗಳಿಗೆ ಶ್ಲಾಘಿಸಿದ್ದಾರೆ.

Tags:

error: Content is protected !!