Belagavi

ನೀಟ್ ಅಕ್ರಮ ಖಂಡಿಸಿ ಬೆಳಗಾವಿಯಲ್ಲಿ AIDSO ಬೃಹತ್ ಪ್ರತಿಭಟನೆ: ಜಿಲ್ಲಾಧಿಕಾರಿಗಳಿಗೆ ಮನವಿ

Share

ರಾಷ್ಟ್ರಮಟ್ಟದ ನೀಟ್ ಪರೀಕ್ಷೆಯಲ್ಲಿ ನಡೆದಿರುವ ಸರಣಿ ಅಕ್ರಮಗಳನ್ನು ಖಂಡಿಸಿ ಬೆಳಗಾವಿಯಲ್ಲಿ ಇಂದು ಎಐಡಿಎಸ್‌ಓ ಸಂಘಟನೆಯ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡುತ್ತಿರುವ ಕೇಂದ್ರ ಸರ್ಕಾರದ ನೀತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಬೆಳಗಾವಿಯಲ್ಲಿ ಎಐಡಿಎಸಓ ಸಂಘಟನೆ ವತಿಯಿಂದ ಇಂದು ಪ್ರತಿಭಟನೆಯನ್ನು ನಡೆಸಿ, ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.

ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಯುತ್ತಿದ್ದು, ನೀಟ್ ಪರೀಕ್ಷೆಯ ಹಗರಣದಿಂದಾಗಿ ಸುಮಾರು 27 ಲಕ್ಷ ವಿದ್ಯಾರ್ಥಿಗಳಿಗೆ ತೀವ್ರ ಅನ್ಯಾಯವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಈ ಪರೀಕ್ಷಾ ಅಕ್ರಮದ ಮಾನಸಿಕ ಒತ್ತಡ ತಾಳಲಾರದೆ ಈಗಾಗಲೇ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಾವುಗಳಿಗೆ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ದೆಹಲಿಯಲ್ಲಿ ಕಳೆದ 29 ದಿನಗಳಿಂದ ವಿವಿಧ ವಿದ್ಯಾರ್ಥಿ ಸಂಘಟನೆಗಳು ನಿರಂತರ ಹೋರಾಟ ನಡೆಸುತ್ತಿದ್ದು, ಸರ್ಕಾರವು ಪೊಲೀಸರನ್ನು ಬಳಸಿ ಹೋರಾಟಗಾರರನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ ಎಂದು ಅವರು ತೀವ್ರವಾಗಿ ಖಂಡಿಸಿದರು. ಜುಲೈ 20 ರಂದು ದೆಹಲಿಯಲ್ಲಿ ಹಮ್ಮಿಕೊಳ್ಳಲಾಗಿರುವ ‘ಪಾರ್ಲಿಮೆಂಟ್ ಚಲೋ’ ಹೋರಾಟವನ್ನು ಹತ್ತಿಕ್ಕುವ ಉದ್ದೇಶದಿಂದಲೇ ಸರ್ಕಾರವು 21 ದಿನಗಳಿಂದ ಉಪವಾಸ ನಿರತರಾಗಿದ್ದ ವಿಜ್ಞಾನಿ ಮತ್ತು ಶಿಕ್ಷಕ ಸೋನಮ್ ವಾಂಗ್ಚುಕ್ ಸೇರಿದಂತೆ ಹಲವು ಹೋರಾಟಗಾರರನ್ನು ಕಾನೂನುಬಾಹಿರವಾಗಿ ದೆಹಲಿ ಪೊಲೀಸರ ಮೂಲಕ ಬಂಧಿಸಿದೆ ಎಂದು ಎಐಡಿಎಸ್‌ಓ ಜಿಲ್ಲಾಧ್ಯಕ್ಷ ಮಹಾಂತೇಶ್ ಬಿಳ್ಳೂರ ಆರೋಪಿಸಿದರು. ಹೋರಾಟಗಾರರ ಆರೋಗ್ಯದ ನೆಪವೊಡ್ಡಿ ಸರ್ಕಾರವು ಕಳ್ಳದಾರಿ ಹಿಡಿದಿದ್ದು, ಇಂತಹ ದಮನಕಾರಿ ನೀತಿಯನ್ನು ಕೈಬಿಟ್ಟು ಸರ್ಕಾರ ತಕ್ಷಣವೇ ಹೋರಾಟಗಾರರೊಂದಿಗೆ ಪ್ರಜಾಪ್ರಭುತ್ವ ಮಾದರಿಯಲ್ಲಿ ಸಂವಾದ ಆರಂಭಿಸಬೇಕು ಮತ್ತು ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂದು ಅವರು ಈ ಸಂದರ್ಭದಲ್ಲಿ ಬಲವಾಗಿ ಆಗ್ರಹಿಸಿದರು.

ಈ ವೇಳೆ ಎಐಡಿಎಸಒ ಸಂಘಟನೆಯ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ಧರು.

Tags:

error: Content is protected !!