Belagavi

ಬೆಳಗಾವಿಯ ಕ್ಲಬ್‌ಗಳ ಮೇಲೆ ಪೊಲೀಸರ ತೀವ್ರ ನಿಗಾ; ಅಕ್ರಮ ಜೂಜಾಟದ ವಿರುದ್ಧ ಖಡಕ್ ವಾರ್ನಿಂಗ್

Share

ಬೆಳಗಾವಿ ನಗರ ಮತ್ತು ಜಿಲ್ಲಾದ್ಯಂತ ಇರುವ ಕ್ಲಬ್ ಹಾಗೂ ಮನರಂಜನಾ ಕೇಂದ್ರಗಳ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆಗೆ ಇಳಿದಿದೆ. ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ಕಾನೂನು ಉಲ್ಲಂಘಿಸುವ ಕ್ಲಬ್‌ಗಳ ವಿರುದ್ಧ ಕಠಿಣ ಕಾನೂನು ಕ್ರಮದ ಜಂಟಿ ಎಚ್ಚರಿಕೆ ನೀಡಿದ್ದಾರೆ.

ಇತ್ತೀಚೆಗೆ ನಗರದಲ್ಲಿ ನಡೆದ ಕೆಲ ಘಟನೆಗಳ ಹಿನ್ನೆಲೆಯಲ್ಲಿ ಬೆಳಗಾವಿ ನಗರ ಪೊಲೀಸ್ ಇಲಾಖೆ ಕ್ಲಬ್‌ಗಳು, ಜಿಮಖಾನಾಗಳು ಹಾಗೂ ಇತರೆ ಮನರಂಜನಾ ಕೇಂದ್ರಗಳ ಕಾರ್ಯಾಚರಣೆಯ ಮೇಲೆ ವಿಶೇಷ ನಿಗಾ ವಹಿಸಿದೆ. ನಗರದ ಎಲ್ಲಾ ಕ್ಲಬ್‌ಗಳ ಸಮಗ್ರ ಪರಿಶೀಲನೆ ನಡೆಸಿ 10 ದಿನಗಳ ಒಳಗೆ ವರದಿ ಸಲ್ಲಿಸುವಂತೆ ಪೊಲೀಸ್ ಠಾಣಾ ಇನ್‌ಸ್ಪೆಕ್ಟರ್‌ಗಳಿಗೆ ನಗರ ಪೊಲೀಸ್ ಆಯುಕ್ತರಾದ ಭೂಷಣ್ ಬೋರಸೆ ಅವರು ಸೂಚನೆ ನೀಡಿದ್ದಾರೆ. ಹೈಕೋರ್ಟ್ ನಿರ್ದೇಶನದನ್ವಯ ಕ್ಲಬ್‌ಗಳಲ್ಲಿ ಸಿಸಿಟಿವಿ ಅಳವಡಿಕೆ, 15 ದಿನಗಳ ದೃಶ್ಯಾವಳಿ ಸಂರಕ್ಷಣೆ, ಕೇವಲ ಸದಸ್ಯರಿಗೆ ಮಾತ್ರ ಪ್ರವೇಶ ಮತ್ತು ಹಣದ ಪಣ ಹಾಗೂ ಜೂಜಾಟಕ್ಕೆ ಸಂಪೂರ್ಣ ನಿಷೇಧ ಸೇರಿದಂತೆ ಹಲವು ಕಟ್ಟುನಿಟ್ಟಿನ ಷರತ್ತುಗಳನ್ನು ಲಿಖಿತ ರೂಪದಲ್ಲಿ ಆಡಳಿತ ಮಂಡಳಿಗಳಿಗೆ ನೀಡಲಾಗುತ್ತಿದೆ. ನಿಯಮ ಉಲ್ಲಂಘಿಸುವ ಕ್ಲಬ್‌ಗಳ ಪರವಾನಗಿ ರದ್ದುಗೊಳಿಸಲು ಶಿಫಾರಸು ಮಾಡುವುದಾಗಿ ಎಚ್ಚರಿಸಿರುವ ಆಯುಕ್ತರು, ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯುವುದಷ್ಟೇ ಈ ವಿಶೇಷ ಅಭಿಯಾನದ ಉದ್ದೇಶವಾಗಿದ್ದು, ಕಾನೂನುಬದ್ಧವಾಗಿ ನಡೆಯುವ ಕೇಂದ್ರಗಳಿಗೆ ಯಾವುದೇ ತೊಂದರೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕೆ. ರಾಮರಾಜನ್ ಅವರು, ಜಿಲ್ಲೆಯ ಯಾವುದೇ ವ್ಯಾಪ್ತಿಯಲ್ಲಿ ಅಕ್ರಮ ಜೂಜಾಟ ಅಥವಾ ಗ್ಯಾಂಬ್ಲಿಂಗ್ ಕ್ಲಬ್‌ಗಳನ್ನು ನಡೆಸಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ನಮ್ಮ ವ್ಯಾಪ್ತಿಯಲ್ಲಿ ನೈಜ ಸಾಮಾಜಿಕ ಕ್ಲಬ್‌ಗಳಿಗೆ ಮುಕ್ತ ಅವಕಾಶವಿದೆ. ಟೆನ್ನಿಸ್, ಬ್ಯಾಡ್ಮಿಂಟನ್ ಅಥವಾ ಮನರಂಜನಾ ಕ್ರೀಡೆಗಳಿರುವ ಅಧಿಕೃತ ಕ್ಲಬ್‌ಗಳನ್ನು ನಾವು ಬ್ಯಾನ್ ಮಾಡುವುದಿಲ್ಲ. ಆದರೆ ಕ್ಲಬ್‌ಗಳ ಹೆಸರಿನಲ್ಲಿ ನಾಲ್ಕು ಟೇಬಲ್ ಹಾಕಿಕೊಂಡು, ಬುಕ್ಕಿ ಇಟ್ಟುಕೊಂಡು, ಬಡ್ಡಿ ದಂಧೆ ಹಾಗೂ ಅಕ್ರಮ ಜೂಜಾಟ ನಡೆಸಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಸಿದ್ದಾರೆ. ತಮ್ಮ ಇಂಟೆಲಿಜೆನ್ಸ್ ಮಾಹಿತಿ ಪ್ರಕಾರ ಪ್ರಸ್ತುತ ಬೆಳಗಾವಿ ಜಿಲ್ಲೆಯಲ್ಲಿ ಯಾವುದೇ ಅಕ್ರಮ ಜೂಜಾಟದ ಕ್ಲಬ್‌ಗಳಿಲ್ಲ ಎಂದು ತಿಳಿಸಿದ ಎಸ್‌ಪಿ ಅವರು, ಸಾರ್ವಜನಿಕರು ಒಂದು ವೇಳೆ ಇಂತಹ ಅಕ್ರಮ ದಂಧೆಗಳ ಬಗ್ಗೆ ಮಾಹಿತಿ ನೀಡಿದರೆ ತಾವೇ ಖುದ್ದಾಗಿ ದಾಳಿ ನಡೆಸುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ, ಕರ್ತವ್ಯ ಲೋಪವೆಸಗುವ ಪೊಲೀಸ್ ಅಧಿಕಾರಿಗಳ ವಿರುದ್ಧವೂ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

Tags:

error: Content is protected !!