ದಂಡು ಮಂಡಳಿಯ ಸಭೆಯಲ್ಲಿ ಐತಿಹಾಸಿಕ ಕೋಟೆಯ ಮುಂಭಾಗದಲ್ಲಿ ಹೊಸದಾಗಿ ನಿರ್ಮಿಸಲಾದ ವಾಣಿಜ್ಯ ಮಳಿಗೆಗಳ ವಿಷಯವು ಅತ್ಯಂತ ಹೆಚ್ಚು ಚರ್ಚೆಗೆ ಕಾರಣವಾಯಿತು. ಈ ಜಾಗದಲ್ಲಿ ಹೂವಿನ ಮಾರುಕಟ್ಟೆ ಮತ್ತು ಆಟೋಮೊಬೈಲ್ ಆಕ್ಸೆಸರೀಸ್ ಅಂಗಡಿಗಳನ್ನು ಪ್ರಾರಂಭಿಸುವ ಪ್ರಸ್ತಾವನೆಗೆ ಸಂಸದ ಜಗದೀಶ್ ಶೆಟ್ಟರ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೆ, ಈ ಪ್ರದೇಶವನ್ನು ವಾಣಿಜ್ಯ ಬಳಕೆಗಾಗಿ ಬಳಸದೆ, ಕ್ರೀಡೆ ಮತ್ತು ಸಾರ್ವಜನಿಕ ಸೌಲಭ್ಯಗಳಿಗಾಗಿ ಕಾಯ್ದಿರಿಸಬೇಕು ಎಂದು ಒತ್ತಾಯಿಸಿದರು.


ಬ್ರಿಗೇಡಿಯರ್ ಜಾಯ್ದೀಪ್ ಮುಖರ್ಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಂಟೋನ್ಮೆಂಟ್ ಮಂಡಳಿ ಸಭೆಯಲ್ಲಿ ಸಂಸದ ಜಗದೀಶ್ ಶೆಟ್ಟರ್ ಅವರು ಐತಿಹಾಸಿಕ ಕೋಟೆಯ ಸುತ್ತಮುತ್ತ ಗ್ಯಾರೇಜ್, ಟೈರ್ ಅಥವಾ ಪಂಕ್ಚರ್ ಅಂಗಡಿಗಳು ಪ್ರಾರಂಭವಾದರೆ ಇಡೀ ಪ್ರದೇಶದ ಸೌಂದರ್ಯ ಹಾಳಾಗುತ್ತದೆ, ಕಸದ ಸಮಸ್ಯೆ ಹೆಚ್ಚಾಗುತ್ತದೆ ಮತ್ತು ಪರಂಪರೆ ತಾಣದ ಸೌಂದರ್ಯಕ್ಕೆ ಧಕ್ಕೆ ಬರುತ್ತದೆ ಎಂದು ಶೆಟ್ಟರ್ ಅಭಿಪ್ರಾಯಪಟ್ಟರು. ಅದಕ್ಕೆ ಬದಲಾಗಿ ಪಿಪಿಪಿ ಮಾದರಿಯಲ್ಲಿ ಆಧುನಿಕ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಮತ್ತು ಮಕ್ಕಳಿಗಾಗಿ ಭವ್ಯವಾದ ಆಟದ ಮೈದಾನವನ್ನು ನಿರ್ಮಿಸುವ ಪ್ರಸ್ತಾವನೆಯನ್ನು ಅವರು ಮುಂದಿಟ್ಟರು.

ಇದಕ್ಕೆ ಪ್ರತಿಕ್ರಿಯಿಸಿದ ಬ್ರಿಗೇಡಿಯರ್ ಗಿರೀಶ್ ಉಪಾಧ್ಯಾಯ ಅವರು, ಟೆಂಡರ್ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿರುವುದರಿಂದ ಮತ್ತು ಗುತ್ತಿಗೆದಾರರು ಹೂಡಿಕೆ ಮಾಡಿರುವುದರಿಂದ, ಈಗ ನಿರ್ಧಾರವನ್ನು ಹಿಂಪಡೆದರೆ ಕಾನೂನು ಸಂಘರ್ಷಗಳು ಉಂಟಾಗಬಹುದು ಎಂದು ಸ್ಪಷ್ಟಪಡಿಸಿದರು. ಅಂತಿಮವಾಗಿ, ಮುಖ್ಯ ರಸ್ತೆಯ ಪಕ್ಕದಲ್ಲಿರುವ ಜಾಗದ ಬದಲಾಗಿ, ಹಿಂಭಾಗದ ಪಾಳು ಬಿದ್ದಿರುವ ಜಾಗವನ್ನು ಆದಾಯ ಹೆಚ್ಚಳಕ್ಕಾಗಿ ಬಳಸಿಕೊಳ್ಳುವ ಪರ್ಯಾಯ ಆಲೋಚನೆ ಮುಂಚೂಣಿಗೆ ಬಂದಿತು. ಈ ಬಗ್ಗೆ ಕಾನೂನು ಸಲಹೆ ಪಡೆದು ಅಂತಿಮ ನಿರ್ಧಾರ ಕೈಗೊಳ್ಳಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ದಂಡು ಮಂಡಳಿಯ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಳ್ಳಲು ಕಾರಣಗಳೇನು ಎಂಬ ಬಗ್ಗೆಯೂ ಪರಿಶೀಲನೆ ನಡೆಸಲಾಯಿತು. ಕಟ್ಟಡ ನಿರ್ಮಾಣ ಸಾಮಗ್ರಿಗಳ ಬೆಲೆ ಏರಿಕೆಯಾಗುತ್ತಿರುವುದರಿಂದ ಗುತ್ತಿಗೆದಾರರು ಟೆಂಡರ್ಗಳಿಂದ ಹಿಂದೆ ಸರಿಯುತ್ತಿದ್ದಾರೆ ಎಂದು ಸಿಇಒ ಸುದಾಮ್ ಮಂಚಲವಾರ್ ಮಾಹಿತಿ ನೀಡಿದರು. ಇದಕ್ಕೆ ಪ್ರತಿಯಾಗಿ, ಸದ್ಯದ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಹೊಸ ಅಂದಾಜು ಪಟ್ಟಿಗಳನ್ನು (ಎಸ್ಟಿಮೇಟ್) ಸಿದ್ಧಪಡಿಸಿ ಮರು ಟೆಂಡರ್ ಕರೆಯುವಂತೆ ಸೂಚನೆ ನೀಡಲಾಯಿತು.
ಇದಲ್ಲದೆ, ದಂಡು ಮಂಡಳಿಯ ವ್ಯಾಪ್ತಿಯ ಮರಾಠಿ, ಇಂಗ್ಲಿಷ್ ಮತ್ತು ಉರ್ದು ಮಾಧ್ಯಮದ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗಾಗಿ ೪೭ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಅನುಮೋದನೆ ನೀಡಲಾಯಿತು. ಶಾಲೆಗಳಲ್ಲಿ ಬಹುಪಯೋಗಿ ಸಭಾಂಗಣ ಮತ್ತು ಅಡುಗೆ ಕೋಣೆ ನಿರ್ಮಿಸಲು ಹಸಿರು ನಿಶಾನೆ ತೋರಿಸಲಾಯಿತು. ಹಾಕಿ ಮೈದಾನದ ಅಭಿವೃದ್ಧಿ, ಫುಟ್ಬಾಲ್ ಸಂಸ್ಥೆಗಳೊಂದಿಗೆ ಸಹಭಾಗಿತ್ವ ಹಾಗೂ ಧೋಬಿಘಾಟ್ ಪ್ರದೇಶದಲ್ಲಿ ಮುಚ್ಚಿರುವ ಬೋರ್ವೆಲ್ಗಳನ್ನು ತಕ್ಷಣವೇ ಸಬಲೀಕರಿಸಿ ಚಾಲನೆ ನೀಡುವ ನಿರ್ಧಾರಗಳನ್ನು ಸಭೆಯಲ್ಲಿ ತೆಗೆದುಕೊಳ್ಳಲಾಯಿತು.
ಸಭೆಯಲ್ಲಿ ಸಂಸದ ಜಗದೀಶ್ ಶೆಟ್ಟರ್, ಬ್ರಿಗೇಡಿಯರ್ ಗಿರೀಶ್ ಉಪಾಧ್ಯಾಯ, ಸಿಇಒ ಸುದಾಮ್ ಮಂಚಲವಾರ್, ಸುಧೀರ್ ತುಪೇಕರ್ ಸೇರಿದಂತೆ ಕಂಟೋನ್ಮೆಂಟ್ ಮಂಡಳಿಯ ಅಧಿಕಾರಿಗಳು ಉಪಸ್ಥಿತರಿದ್ದರು.
