ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಚಿಕ್ಕಬೂದನೂರು ಗ್ರಾಮದಲ್ಲಿ ಕೇವಲ ಒಂದು ಮೊಬೈಲ್ ಫೋನ್ಗಾಗಿ ನಡೆದ ಜಗಳ ವಿಕೋಪಕ್ಕೆ ತಿರುಗಿ, ವ್ಯಕ್ತಿಯೊಬ್ಬನನ್ನು ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಮುರಗೋಡ ಪೊಲೀಸರು ತಕ್ಷಣವೇ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ತಿಳಿಸಿದ್ದಾರೆ.

ಮುರಗೋಡ ಪೊಲೀಸ್ ಠಾಣೆ ವ್ಯಾಪ್ತಿಯ ಚಿಕ್ಕಬೂದನೂರು ಗ್ರಾಮದ ಲಕ್ಷ್ಮೀದೇವಿ ದೇವಸ್ಥಾನದ ಆವರಣದಲ್ಲಿ ನಿನ್ನೆ ರಾತ್ರಿ ಸುಮಾರು 7 ರಿಂದ 8 ಗಂಟೆಯ ಅವಧಿಯಲ್ಲಿ ಈ ಹತ್ಯೆ ನಡೆದಿದೆ. ಮೃತರನ್ನು ಅದೇ ಗ್ರಾಮದ ನಿವಾಸಿ, ಕೂಲಿ ಕೆಲಸ ಮಾಡುತ್ತಿದ್ದ ಫಕೀರಪ್ಪ ಮಲ್ಲಪ್ಪ ಹಿಡ್ಕನ್ನವರ (40 ವರ್ಷ) ಎಂದು ಗುರುತಿಸಲಾಗಿದೆ. ಮೃತನಿಗೆ ಈ ಹಿಂದೆ ಸಣ್ಣಪುಟ್ಟ ಕಳ್ಳತನ ಹಾಗೂ ಪಿಕ್ಪಾಕೆಟ್ ಮಾಡುವ ಅಭ್ಯಾಸವಿತ್ತು ಎನ್ನಲಾಗಿದ್ದು, ಇತ್ತೀಚೆಗೆ ತನ್ನದೇ ಸ್ನೇಹಿತನಾದ ಮಲ್ಲಿಕಾರ್ಜುನ ಸಿದ್ದಪ್ಪ ಪೂಜೇರಿ (25 ವರ್ಷ) ಎಂಬಾತನ ಮೊಬೈಲ್ ಫೋನನ್ನು ತೆಗೆದುಕೊಂಡಿದ್ದನು. ಇದೇ ವಿಚಾರವಾಗಿ ಇಬ್ಬರ ನಡುವೆ ದೇವಸ್ಥಾನದ ಆವರಣದಲ್ಲಿ ತೀವ್ರ ತಂಟೆ ತಕರಾರು ನಡೆದಿದೆ.
ಫಕೀರಪ್ಪ ಲಕ್ಷ್ಮೀದೇವಿ ಗುಡಿಯ ಭಾವಣಿಯಲ್ಲಿ ಮಲಗಿದ್ದಾಗ ಅಲ್ಲಿಗೆ ಬಂದ ಆರೋಪಿ ಮಲ್ಲಿಕಾರ್ಜುನ, ತನ್ನ ಮೊಬೈಲ್ ವಾಪಸ್ ನೀಡುವಂತೆ ಕೇಳಿದ್ದಾನೆ. ಆದರೆ ಮೃತ ಫಕೀರಪ್ಪ ರಾತ್ರಿ ಕೊಡುವುದಾಗಿ ಹೇಳಿ ಮೊಬೈಲ್ ನೀಡಲು ನಿರಾಕರಿಸಿದಾಗ ಇಬ್ಬರ ನಡುವೆ ಜಗಳ ಶುರುವಾಗಿದೆ. ಇದರಿಂದ ತೀವ್ರ ಕೋಪಗೊಂಡ ಆರೋಪಿ ಮಲ್ಲಿಕಾರ್ಜುನ, “ನಿನ್ನ ಕಾಟ ಬಹಳ ಆಗಿದೆ, ನಿನ್ನ ಮುಗಿಸಿಬಿಡುತ್ತೇನೆ” ಎಂದು ಹೇಳಿ ಅಲ್ಲೇ ದೇವಸ್ಥಾನದ ಬಳಿಯಿದ್ದ ಅಂಗಾರ ಇಡುವ ಭಾರವಾದ ಕಲ್ಲನ್ನು ಎತ್ತಿ ಫಕೀರಪ್ಪನ ತಲೆಗೆ ಜಜ್ಜಿದ್ದಾನೆ. ತಲೆಗೆ ಗಂಭೀರ ಗಾಯಗೊಂಡ ಫಕೀರಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮೃತನ ಹೆಂಡತಿ ಭಾರತಿ ಹಿಡ್ಕನ್ನವರ ನೀಡಿದ ದೂರಿನನ್ವಯ ಮುರಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಮೊಬೈಲ್ ನೀಡುವ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಕೊಲೆಯಾದ ಮೃತನ ಸಹೋದರ ಸಿದ್ಧಾರ್ಥ್ ಮಾಧ್ಯಮಗಳೊಂದಿಗೆ ಮಾತನಾಡಿ, ಮೊಬೈಲ್ ವಾಪಸ್ ನೀಡುವ ಗಡುವಿನ ಕುರಿತು ಉಂಟಾದ ವಿವಾದವೇ ಈ ಘಟನೆಗೆ ಕಾರಣ ಎಂದು ತಿಳಿಸಿದ್ದಾರೆ. ಆರೋಪಿಯೊಂದಿಗೆ ತಮಗೆ ಯಾವುದೇ ವೈಯಕ್ತಿಕ ದ್ವೇಷ ಅಥವಾ ಹಣಕಾಸಿನ ವ್ಯವಹಾರ ಇರಲಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದರು.
ತಮ್ಮ ಮನೆ ರಸ್ತೆಯಲ್ಲೇ ಇರುವ ರಮೇಶ್ ಎಂಬಾತನೇ ಈ ಕೊಲೆಗೆ ನೇರ ಸಾಕ್ಷಿಯಾಗಿದ್ದಾನೆ ಎಂದು ಮೃತನ ಕುಟುಂಬಸ್ಥರು ತಿಳಿಸಿದ್ದಾರೆ. ಆರೋಪಿಯು ಏಕಾಏಕಿ ಬಂದು ಹೊಟ್ಟೆ, ಬಾಯಿ ಹಾಗೂ ಕಿವಿಯ ಭಾಗಕ್ಕೆ ಕಲ್ಲಿನಿಂದ ತೀವ್ರವಾಗಿ ಜಜ್ಜಿ, ಒಂದೇ ಹೊಡೆತಕ್ಕೆ ಜೀವ ಹೋಗುವಂತೆ ನಡುರಸ್ತೆಯಲ್ಲೇ ಕ್ರೂರವಾಗಿ ಹತ್ಯೆ ಮಾಡಿದ್ದಾನೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ. ಮೃತ ಯುವಕನಿಗೆ ಇನ್ನು ಮದುವೆಯಾಗಿರಲಿಲ್ಲ, ಆತನಿಗೆ ನಾಲ್ಕು ಜನ ಸಹೋದರರಿದ್ದು, ತಮಗೆ ಸೂಕ್ತ ನ್ಯಾಯ ಹಾಗೂ ಪರಿಹಾರ ಸಿಗಬೇಕು ಎಂದು ಕುಟುಂಬಸ್ಥರು ಕಣ್ಣೀರಿಡುತ್ತಾ ಮಾಧ್ಯಮಗಳ ಎದುರು ಒತ್ತಾಯಿಸಿದ್ದಾರೆ.
