Uncategorized

ಕಾಗವಾಡ: ಐನಾಪುರ ಏತ ನೀರಾವರಿ ಯೋಜನೆ ಸ್ಥಗಿತ; ಅಧಿಕಾರಿಗಳ ಕಚೇರಿ ಮುಂದೆ ಮುಂಗಸುಳಿ ರೈತರ ಬೃಹತ್ ಪ್ರತಿಭಟನೆ

Share

ಐನಾಪುರ ಏತ ನೀರಾವರಿ ಯೋಜನೆ ಮುಖಾಂತರ ಕಾಲುವೆಗಳಿಗೆ ನೀರು ಹರಿಸುವ ಯೋಜನೆ ಜುಲೈ 10 ರಿಂದ ಪ್ರಾರಂಭಗೊಂಡಿತ್ತು. ಆದರೆ ಕೇವಲ ಐದೇ ದಿನಗಳಲ್ಲಿ ನದಿಯಲ್ಲಿ ನೀರು ಖಾಲಿಯಾಗಿದೆ ಎಂಬ ಕಾರಣ ನೀಡಿ, ಜುಲೈ 15ರ ಬುಧವಾರದಂದು ಯೋಜನೆಯನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ರೊಚ್ಚಿಗೆದ್ದ ರೈತರು ಯೋಜನೆಯ ಕಚೇರಿ ಎದುರು ಪ್ರತಿಭಟಿಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಶುಕ್ರವಾರದಂದು ಮಂಗಸುಳಿ ಪಂಪ್ ಹೌಸ್ ಹತ್ತಿರ ಗ್ರಾಮದ ಮುಖಂಡರು ಮತ್ತು ಜಿಲ್ಲಾ ಪಂಚಾಯಿತಿಯ ಮಾಜಿ ಸದಸ್ಯ ರವೀಂದ್ರ ಪೂಜಾರಿ ಇವರ ನೇತೃತ್ವದಲ್ಲಿ ರೈತರು ಒಂದುಗೂಡಿ, ಸ್ಥಗಿತಗೊಳಿಸಿದ ಯೋಜನೆಯನ್ನು ಮತ್ತೆ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು. ರೈತ ಮುಖಂಡರಾದ ಬಾಬಾಸಾಹೇಬ್ ಪಾಟೀಲ್, ಮಿಲಿಂದ್ ವರಾಳೆ, ರಮೇಶ್ ಕುಟುವಾಡೆ, ರವಿ ಪಾಟೀಲ್ ಸೇರಿದಂತೆ ಅನೇಕ ರೈತರು ನೀರಾವರಿ ಇಲಾಖೆಯ ಅಧಿಕಾರಿಯಾದ ಪ್ರಶಾಂತ್ ಪೋತದಾರ್ ಅವರನ್ನು ಭೇಟಿಯಾಗಿ ತಕ್ಷಣ ಯೋಜನೆ ಪ್ರಾರಂಭಿಸಲು ಕೇಳಿಕೊಂಡರು. ಕೇವಲ ಐದು ದಿನಗಳಲ್ಲಿ ಕಾಲುವೆ ನೀರು ಸ್ಥಗಿತಗೊಳಿಸಿರುವುದರಿಂದ ಬಿತ್ತನೆ ಮಾಡಿದ ಬೆಳೆಗಳಿಗೆ ತೊಂದರೆಯಾಗಲಿದ್ದು, ಬೇಗನೆ ನೀರು ಬಿಡಬೇಕು ಎಂದು ಆಗ್ರಹಿಸಿದರು.

ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ರವೀಂದ್ರ ಪೂಜಾರಿ ಮಾತನಾಡಿ, “ರಾಜ್ಯ ಸರ್ಕಾರ ಈ ವರ್ಷ ಮಳೆ ತಡವಾಗಿದ್ದರಿಂದ ಜುಲೈ ತಿಂಗಳ 10ರ ಶುಕ್ರವಾರದಂದು ಯೋಜನೆ ಪ್ರಾರಂಭಿಸಿತು. ಆದರೆ ಕೇವಲ ಐದೇ ದಿನಗಳಲ್ಲಿ ನೀರಿಲ್ಲದ ಕಾರಣ ಮುಂದಿಟ್ಟು ಯೋಜನೆಯನ್ನು ಸ್ಥಗಿತಗೊಳಿಸಿರುವುದು ರೈತರಿಗೆ ಮಾಡಿದ ಅನ್ಯಾಯವಾಗಿದೆ. ಸುಮಾರು 14 ಸಾವಿರ ಎಕರೆ ಪ್ರದೇಶದಲ್ಲಿದ್ದ ಕಬ್ಬು ಮತ್ತು ದ್ರಾಕ್ಷಿ ಬೆಳೆಗಳಿಗೆ ನೀರಿಲ್ಲದೆ ಹಾನಿ ಉಂಟಾಗಿದೆ. ಇದರಿಂದ ರೈತರಿಗೆ ಸಾವಿರಾರು ಕೋಟಿ ರೂಪಾಯಿ ನಷ್ಟವಾಗಲಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಕಾಲುವೆಗಳಿಗೆ ನೀರು ಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು” ಎಂದರು.

ಮುಂದುವರಿದು ಮಾತನಾಡಿದ ಅವರು, “ರಾಜ್ಯದ ಮುಖ್ಯಮಂತ್ರಿಗಳು, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಎಲ್ಲ ಜನಪ್ರತಿನಿಧಿಗಳು ಮಹಾರಾಷ್ಟ್ರ ರಾಜ್ಯದಿಂದ ಕೆಲವು ಟಿಎಂಸಿ ನೀರನ್ನು ನದಿಗೆ ಹರಿಸಿ ರೈತರಿಗೆ ಪೂರೈಸಲು ಪ್ರಯತ್ನಿಸಲಿದ್ದಾರೆ ಎಂದು ನನಗೆ ಮಾಹಿತಿ ಲಭಿಸಿದೆ” ಎಂದು ಹೇಳಿದರು.

 

ನೀರಾವರಿ ಇಲಾಖೆಯ ಇಂಜಿನಿಯರ್ ಪ್ರಶಾಂತ್ ಪೋತದಾರ್ ಅವರು ರೊಚ್ಚಿಗೆದ್ದ ರೈತರಿಗೆ ಸದ್ಯದ ಪರಿಸ್ಥಿತಿಯ ಸಂಪೂರ್ಣ ಮಾಹಿತಿಯನ್ನು ವಿವರಿಸಿದರು. “ಸಕಾಲದಲ್ಲಿ ಮಳೆಯಾಗದ ಕಾರಣ ಜೂನ್ ತಿಂಗಳಿನಲ್ಲಿ ನದಿಗೆ ನೀರು ಹರಿಯಲಿಲ್ಲ. ಜುಲೈ ತಿಂಗಳಿನಲ್ಲಿ ನೀರು ಬಂದಾಗ ಯೋಜನೆ ಪ್ರಾರಂಭಿಸಿದೆವು. ಆದರೆ ಈಗ ನೀರಿನ ಮಟ್ಟ ಸಂಪೂರ್ಣವಾಗಿ ಕುಸಿದಿದೆ. ನದಿಯಲ್ಲಿ ಸದ್ಯ ಇರುವ ನೀರು ಜನ ಜಾನುವಾರುಗಳ ಕುಡಿಯುವ ಉದ್ದೇಶಕ್ಕೆ ಅತ್ಯಾವಶ್ಯಕವಾಗಿದೆ. ಈ ನೀರನ್ನು ಹರಿದು ಹೋಗಲು ಬಿಡದೆ ನದಿಯಲ್ಲೇ ಉಳಿಸಿಕೊಳ್ಳಲು ರಾಜ್ಯ ಸರ್ಕಾರದ ಮೇಲಾಧಿಕಾರಿಗಳು ಆದೇಶಿಸಿದ್ದಾರೆ. ಹೀಗಾಗಿ ಯೋಜನೆ ಸ್ಥಗಿತಗೊಳಿಸಲಾಗಿದೆ. ನದಿಗೆ ಪುನಃ ನೀರು ಬಂದ ತಕ್ಷಣ ಯೋಜನೆಯನ್ನು ಪುನರಾರಂಭಿಸಲಾಗುವುದು” ಎಂದು ಸ್ಪಷ್ಟಪಡಿಸಿದರು.

 

ಈ ಪ್ರತಿಭಟನೆಯಲ್ಲಿ ಮಂಗಸೂಳಿ ಗ್ರಾಮದ ರೈತ ಮುಖಂಡರಾದ ಭರತ್ ಮಾಳಿ, ದನ್ಪಾಲ್ ಮಾಳಿ, ಗೋಪಾಲ್ ಇನಾಮ್ದಾರ್, ಧನಾಜಿ ಇನಾಮ್ದಾರ್, ಬಂಡು ಪಾಟೀಲ್, ಮಿಲಿಂದ ವರಾಳೆ ಸೇರಿದಂತೆ ಅನೇಕ ರೈತರು ಪಾಲ್ಗೊಂಡಿದ್ದರು.

Tags:

error: Content is protected !!