Uncategorized

ಸಿದ್ದರಾಮಯ್ಯ ನಡುವೆ ಯಾವುದೇ ಗೊಂದಲವಿಲ್ಲ, ಬೆಳಗಾವಿಗೆ ಮತ್ತೊಂದು ಸಚಿವ ಸ್ಥಾನ ಸಿಗಬೇಕು: ಸತೀಶ್ ಜಾರಕಿಹೊಳಿ

Share

ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ನಮ್ಮ ನಡುವೆ ಯಾವುದೇ ಅಸಮಾಧಾನವಾಗಲಿ, ಗೊಂದಲವಾಗಲಿ ಇಲ್ಲ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ತಮಗೆ ಭಿನ್ನಾಭಿಪ್ರಾಯವಿದೆ ಎನ್ನುವ ವದಂತಿಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ ಸಚಿವ ಸತೀಶ್ ಜಾರಕಿಹೊಳಿ, ಮಾಧ್ಯಮಗಳೇ ಇಲ್ಲದ ಸಮಸ್ಯೆಯನ್ನು ಸೃಷ್ಟಿಸುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು. “ನಮ್ಮ ನಡುವೆ ಯಾವುದೇ ಗೊಂದಲವೂ ಇಲ್ಲ, ಸಮಸ್ಯೆಯೂ ಇಲ್ಲ. ನಾವು ಕಳೆದ 30 ವರ್ಷಗಳಿಂದ ಜೊತೆಯಾಗಿ ಕೆಲಸ ಮಾಡುತ್ತಿದ್ದೇವೆ, ಹಿಂದೆಯೂ ಚೆನ್ನಾಗಿದ್ದೆವು, ಈಗಲೂ ಚೆನ್ನಾಗಿದ್ದೇವೆ. ಸದ್ಯಕ್ಕೆ ಗೊಂದಲವಿದೆ ಎಂದು ಹುಟ್ಟಿಕೊಂಡಿರುವ ಯಾವುದೇ ಶಕ್ತಿ ಬಹಳ ದಿನಗಳ ಕಾಲ ಉಳಿಯುವುದಿಲ್ಲ,” ಎಂದು ಅವರು ಮಾರ್ಮಿಕವಾಗಿ ನುಡಿದರು. ಇದೇ ವೇಳೆ ಕೆಪಿಸಿಸಿ ಹೊಸ ಅಧ್ಯಕ್ಷರ ನೇಮಕದ ಕುರಿತು ಉತ್ತರಿಸಿ, ಹೊಸ ಅಧ್ಯಕ್ಷರು ಬಂದು ಹೊಸ ತಂಡ ರಚಿಸುವುದು ವಾಡಿಕೆ, ಪಕ್ಷವನ್ನು ಗೆಲ್ಲಿಸಲು ನಾವು ಯಾವಾಗಲೂ ಅವರ ಬೆಂಬಲಕ್ಕೆ ಇರುತ್ತೇವೆ ಎಂದರು.

ಸಂಪುಟ ಪುನಾರಚನೆ ಮತ್ತು ಹೈಕಮಾಂಡ್ ಭೇಟಿಯ ಕುರಿತು ಮಾತನಾಡಿದ ಅವರು, ಸೂಕ್ತ ಸಂದರ್ಭ ಬಂದಾಗ ದೆಹಲಿ ನಾಯಕರನ್ನು ಭೇಟಿಯಾಗುವುದು ಸಹಜ. ಈಗಾಗಲೇ ಸಂಪುಟ ವಿಸ್ತರಣೆ ಬಗ್ಗೆ ಮೊದಲ ಹಂತದ ಚರ್ಚೆ ಮುಗಿದಿದ್ದು, ನಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದೇವೆ. ಎರಡನೇ ಹಂತದ ಚರ್ಚೆಗಳು ಶೀಘ್ರದಲ್ಲೇ ನಡೆಯಲಿದ್ದು, ಅಂತಿಮ ತೀರ್ಮಾನ ಹೈಕಮಾಂಡ್ ಕೈಗೊಳ್ಳಲಿದೆ ಎಂದರು. ಹೊಸಬರಿಗೆ ಹಾಗೂ ಅರ್ಹತೆ ಇರುವವರಿಗೆ ಮಂತ್ರಿ ಸ್ಥಾನ ನೀಡಿದರೆ ಪಕ್ಷಕ್ಕೆ ಒಳ್ಳೆಯದಾಗುತ್ತದೆ ಎನ್ನುವುದು ಹೈಕಮಾಂಡ್ ಆಶಯವಾಗಿದೆ. ಇದೇ ವೇಳೆ ಬೆಳಗಾವಿ ಜಿಲ್ಲೆಗೆ ಸಿಗಬೇಕಾದ ಪ್ರಾತಿನಿಧ್ಯದ ಬಗ್ಗೆ ಒತ್ತಿ ಹೇಳಿದ ಸಚಿವರು, ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನವನ್ನು ನೀಡಲೇಬೇಕು, ಆದರೆ ಹೆಚ್ಚುವರಿ ಸ್ಥಾನ ನೀಡುವ ಅಂತಿಮ ನಿರ್ಧಾರ ಹೈಕಮಾಂಡ್ ಕೋರ್ಟ್‌ಗೆ ಬಿಟ್ಟಿದ್ದು ಎಂದು ತಿಳಿಸಿದರು.

Tags:

error: Content is protected !!