Uncategorized

ವಾಹನ ಸವಾರರಿಗೆ ಸೂಕ್ತ ಇಂಧನ ಆಯ್ಕೆಯ ಹಕ್ಕು ನೀಡಿ: ಬೆಳಗಾವಿ ಜಿಲ್ಲಾಧಿಕಾರಿಗೆ ರಾಜಕುಮಾರ ಟೋಪಣ್ಣವರ ಮನವಿ

Share

ಕೇಂದ್ರ ಸರ್ಕಾರದ ಇಂಧನ ನೀತಿಯಿಂದಾಗಿ ವಾಹನ ಸವಾರರು ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಗೆ ಆಗ್ರಹಿಸಿ ಬೆಳಗಾವಿಯಲ್ಲಿ ಜಿಲ್ಲಾಧಿಕಾರಿಗಳಿಗೆ ಮಹತ್ವದ ಮನವಿ ಸಲ್ಲಿಸಲಾಯಿತು. ಗ್ರಾಹಕರು ಲಕ್ಷಾಂತರ ರೂಪಾಯಿ ನೀಡಿ ವಾಹನ ಖರೀದಿಸಿದರೂ ತಮ್ಮ ವಾಹನಕ್ಕೆ ಸೂಕ್ತವಾದ ಇಂಧನವನ್ನು ಆಯ್ಕೆ ಮಾಡುವ ಹಕ್ಕನ್ನು ನಿರಾಕರಿಸುತ್ತಿರುವುದು ನ್ಯಾಯಸಮ್ಮತವಲ್ಲ ಎಂದು ಹೋರಾಟಗಾರ ರಾಜಕುಮಾರ ಟೋಪಣ್ಣವರ ಆಕ್ರೋಶ ವ್ಯಕ್ತಪಡಿಸಿದರು.

ಭಾರತದಲ್ಲಿ ಮಾರಾಟವಾಗುವ ಪ್ರತಿಯೊಂದು ವಾಹನವು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ನಿಯಮಾವಳಿಗಳನ್ನು ಪಾಲಿಸಿ ಅಗತ್ಯ ಅನುಮತಿಗಳನ್ನು ಪಡೆದ ನಂತರವೇ ಮಾರುಕಟ್ಟೆಗೆ ಬಿಡುಗಡೆಯಾಗುತ್ತದೆ. ಇಂತಹ ವಾಹನಗಳನ್ನು ಖರೀದಿಸುವ ಗ್ರಾಹಕರು ಲಕ್ಷಾಂತರ ರೂಪಾಯಿ ವೆಚ್ಚ ಮಾಡುವುದರ ಜೊತೆಗೆ ಜಿಎಸ್‌ಟಿ, ರಸ್ತೆ ತೆರಿಗೆ, ನೋಂದಣಿ ಶುಲ್ಕ ಸೇರಿದಂತೆ ವಿವಿಧ ತೆರಿಗೆಗಳನ್ನು ಪಾವತಿಸುತ್ತಾರೆ. ಆದ್ದರಿಂದ ತಮ್ಮ ವಾಹನಕ್ಕೆ ಸೂಕ್ತವಾದ ಇಂಧನವನ್ನು ಆಯ್ಕೆ ಮಾಡುವ ಹಕ್ಕು ಗ್ರಾಹಕರಿಗೆ ಇರಬೇಕು ಎಂದು ಆಗ್ರಹಿಸಿ ರಾಜಕುಮಾರ ಟೋಪಣ್ಣವರ ಶುಕ್ರವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಇಂದಿಗೂ ಹಲವು ವಾಹನ ತಯಾರಕರು ತಮ್ಮ ಕೆಲವು ಮಾದರಿಗಳಿಗೆ ಇ- 10 ಅಥವಾ ಅದಕ್ಕಿಂತ ಕಡಿಮೆ ಎಥನಾಲ್ ಮಿಶ್ರಣದ ಪೆಟ್ರೋಲ್‌ನ್ನು ಶಿಫಾರಸು ಮಾಡುತ್ತಿದ್ದಾರೆ. ಆದರೆ ಅಂತಹ ವಾಹನಗಳ ಮಾಲೀಕರಿಗೆ ಪ್ರಸ್ತುತ ಇ- 20 ಪೆಟ್ರೋಲ್ ಹೊರತುಪಡಿಸಿ ಬೇರೆ ಆಯ್ಕೆ ಇಲ್ಲದಂತಾಗಿದೆ. ಇದರಿಂದ ವಾಹನದ ಕಾರ್ಯಕ್ಷಮತೆ, ಮೈಲೇಜ್ ಹಾಗೂ ದೀರ್ಘಾವಧಿಯ ನಿರ್ವಹಣಾ ವೆಚ್ಚದ ಬಗ್ಗೆ ವಾಹನ ಸವಾರರಲ್ಲಿ ಆತಂಕ ವ್ಯಕ್ತವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಭಾರತೀಯ ವಾಹನ ಉದ್ಯಮವನ್ನು ಬೆಂಬಲಿಸುವ ಗ್ರಾಹಕರಿಗೆ ಸೂಕ್ತ ಇಂಧನದ ಆಯ್ಕೆಯನ್ನೇ ನಿರಾಕರಿಸುವುದು ನ್ಯಾಯಸಮ್ಮತವಲ್ಲ. ಯಾವುದೇ ಇಂಧನ ನೀತಿ ರೂಪಿಸುವಾಗ ಗ್ರಾಹಕರ ಹಕ್ಕುಗಳು ಹಾಗೂ ವಾಹನ ತಯಾರಕರ ಶಿಫಾರಸುಗಳಿಗೆ ಗೌರವ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಈ ವೇಳೆ ನ್ಯಾಯವಾದಿ ‌ನಿತೀನ್ ಬೋಳಬಂದಿ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.

Tags:

error: Content is protected !!