ಚುನಾವಣಾ ಆಯೋಗದ ಮತದಾರರ ಪರಿಷ್ಕರಣೆ ಕಾರ್ಯದಲ್ಲಿ ಪ್ರತಿ ಬೂತ್ ಮಟ್ಟದಲ್ಲಿ ಜಾಗೃತವಾಗಿ ಕೆಲಸ ಮಾಡುವುದು ಪಕ್ಷದ ಬಿಎಲ್ಎಗಳ ಜವಾಬ್ದಾರಿಯಾಗಿದೆ ಎಂದು ಎಐಸಿಸಿ ಕಾರ್ಯದರ್ಶಿ ಡಾ. ಅಂಜಲಿ ನಿಂಬಾಳ್ಕರ್ ಹೇಳಿದ್ದಾರೆ. ಖಾನಾಪೂರದಲ್ಲಿ ನಡೆದ ತರಬೇತಿ ಶಿಬಿರದಲ್ಲಿ ಮಾತನಾಡಿದ ಅವರು, ಇತ್ತೀಚಿನ ರಾಜಕೀಯ ವದಂತಿಗಳಿಗೆ ತೆರೆ ಎಳೆಯುತ್ತಾ, ತಾನು ಖಾನಾಪೂರ ಕಾಂಗ್ರೆಸ್ ಕೈ ಬಿಟ್ಟಿಲ್ಲ ಮತ್ತು ಯಾವತ್ತೂ ಬಿಡುವುದಿಲ್ಲ ಎಂದು ವಿರೋಧಿಗಳಿಗೆ ಚಾಟಿ ಬೀಸಿದ್ದಾರೆ.


ಖಾನಾಪೂರ ಪಟ್ಟಣ ಪಂಚಾಯಿತಿ ಮಂಗಲ ಕಾರ್ಯಾಲಯದಲ್ಲಿ ಬ್ಲಾಕ್ ಕಾಂಗ್ರೆಸ್ ಕಮಿಟಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಎಸ್ಐಆರ್ (SIR) ತರಬೇತಿ ಶಿಬಿರದಲ್ಲಿ ಭಾಗವಹಿಸಿ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಮಾತನಾಡಿದರು. ಗ್ರಾಮೀಣ ಭಾಗದ ಜನರಿಗೆ ಎಸ್ಐಆರ್ ಫಾರ್ಮ್ ತುಂಬುವುದು ಕಠಿಣ ಎನಿಸಿದರೂ, ಸರ್ಕಾರದ ಬಿಎಲ್ಒಗಳ ಜೊತೆ ಸಂಪರ್ಕ ಸಾಧಿಸಿ ಸರಿಯಾದ ಮಾಹಿತಿ ನೀಡಿದರೆ ಮತದಾನದ ಹಕ್ಕನ್ನು ಉಳಿಸಿಕೊಳ್ಳಬಹುದು ಎಂದು ತಿಳಿಸಿದ ಅವರು, ನಿರ್ಲಕ್ಷ್ಯ ವಹಿಸಿದರೆ ಹಕ್ಕನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಇದೇ ವೇಳೆ ಕಾರ್ಯಕರ್ತರಲ್ಲಿದ್ದ ಗೊಂದಲಗಳಿಗೆ ತೆರೆ ಎಳೆದ ಅವರು, “ನಾನು ಯಾವತ್ತೂ ನಿಮ್ಮ ಜೊತೆಗಿದ್ದೇನೆ, ಮುಂದಿನ ದಿನಗಳಲ್ಲಿ ನಾವೆಲ್ಲರೂ ಒಟ್ಟಾಗಿ ಚುನಾವಣೆ ಎದುರಿಸಿ ಮತ್ತೆ ಖಾನಾಪೂರದಲ್ಲಿ ಕಾಂಗ್ರೆಸ್ ಬಾವುಟ ಹಾರಿಸೋಣ” ಎನ್ನುವ ಮೂಲಕ ರಾಜಕೀಯ ವಿರೋಧಿಗಳಿಗೆ ಪ್ರತ್ಯುತ್ತರ ನೀಡಿದರು. ಬೆಂಗಳೂರಿನಿಂದ ಆಗಮಿಸಿದ್ದ ಎಐಸಿಸಿ ತರಬೇತುದಾರರು ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಫಾರ್ಮ್ ತುಂಬುವ ಪ್ರಕ್ರಿಯೆ ಕುರಿತು ಕಾಂಗ್ರೆಸ್ ಪಕ್ಷದ ಬಿಎಲ್ಎಗಳಿಗೆ ಸವಿಸ್ತಾರವಾದ ತರಬೇತಿ ನೀಡಿದರು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಪ್ರಚಾರ ಸಮಿತಿ ಅಧ್ಯಕ್ಷ ರಾಜ ಸಲೀಂ ಕಾಶಿಮನವರ, ಖಾನಾಪೂರ ಉಸ್ತುವಾರಿ ಪಾರಸ್ಮಲ್ ಜೈನ್ ಹಾಗೂ ಕೆಪಿಸಿಸಿ ಸದಸ್ಯ ಮಹಾದೇವ ಕೋಳಿ ಸೇರಿದಂತೆ ನೂರಾರು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
