ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಹೆಸರಿನಲ್ಲಿ ದಲಿತ ಸಮುದಾಯ ಹಾಗೂ ಮಹಿಳೆಯರನ್ನು ಅವಹೇಳನ ಮಾಡುತ್ತಿರುವ ಘಟನೆ ಬೆಳಗಾವಿಯಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಫೇಸ್‌ಬುಕ್‌ನಲ್ಲಿ ಜಾತಿ ನಿಂದನೆ ಮಾಡಿರುವ ಆರೋಪಿ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ಯುವ ಕರ್ನಾಟಕ ಭೀಮ್ ಸೇನೆ ಕಾರ್ಯಕರ್ತರು ಅಧಿಕಾರಿಗಳಿಗೆ ದೂರು ಸಲ್ಲಿಸಿ ಪ್ರತಿಭಟನೆ ನಡೆಸಿದ್ದಾರೆ.


ಇತ್ತೀಚಿನ ದಿನಗಳಲ್ಲಿ ಫೇಸ್‌ಬುಕ್ ಖಾತೆಯ ಮೂಲಕ ಸಕ್ರಿಯನಾಗಿರುವ ಮಹಾದೇವ್ ಒಗಸ್ಟಾರ್ ಎಂಬ ವ್ಯಕ್ತಿಯು, ಸೋನು ಶ್ರೀನಿವಾಸ್ ಗೌಡ ಮತ್ತು ವರ್ಷಿಣಿ ಎಂಬುವವರ ನಡುವಿನ ಕಿತ್ತಾಟದ ವಿಷಯದಲ್ಲಿ ವಿನಾಕಾರಣ ಹಸ್ತಕ್ಷೇಪ ಮಾಡಿದ್ದಾನೆ. ಈ ಪ್ರಕ್ರಿಯೆಯಲ್ಲಿ ಆತ ದಲಿತ ಸಮುದಾಯವನ್ನು ಅತ್ಯಂತ ಕೀಳಾಗಿ ನಿಂದಿಸುವ “ಹೊಲಗೇರ” ಎಂಬ ಅಕ್ಷಮ್ಯ ಹಾಗೂ ಜಾತಿ ನಿಂದನೆಯ ಪದಗಳನ್ನು ಬಳಕೆ ಮಾಡಿದ್ದಾನೆ. ಟ್ರೋಲ್ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸುವ ಮೂಲಕ ಮಹಿಳಾ ಗೌರವಕ್ಕೆ ಧಕ್ಕೆ ತರುತ್ತಿರುವ ಹಾಗೂ ಸಮಾಜದಲ್ಲಿ ಶಾಂತಿ ಕದಡಲು ಯತ್ನಿಸುತ್ತಿರುವ ಇಂತಹ ದುಷ್ಕೃತ್ಯಗಳ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಯುವ ಕರ್ನಾಟಕ ಭೀಮ್ ಸೇನೆ ಯುವ ಶಕ್ತಿ ಸಂಘದ ರಾಜ್ಯಾಧ್ಯಕ್ಷರಾದ ಪ್ರವೀಣ್ ಆರ್. ಮಾದರ್ ನೇತೃತ್ವದಲ್ಲಿ ಬೆಳಗಾವಿಯ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಕಛೇರಿ ಮುಂದೆ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು. ಆರೋಪಿ ವಿರುದ್ಧ ತಕ್ಷಣವೇ ಅಟ್ರಾಸಿಟಿ ಮತ್ತು ಮಹಿಳಾ ನಿಂದನೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು, ನಗರ ಪೊಲೀಸ್ ಕಮಿಷನರ್ ಹಾಗೂ ಡಿ.ಸಿ.ಆರ್.ಇ ಎಸ್ಪಿ ಅವರಿಗೆ ದೂರು ಸಲ್ಲಿಸಲಾಯಿತು.

ಯುವ ಕರ್ನಾಟಕ ಭೀಮಸೇನೆಯ ರಾಜ್ಯಾಧ್ಯಕ್ಷರಾದ ಪ್ರವೀಣ್ ಆರ್. ಮಾದರ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸುವ ಮೂಲಕ ಶಾಂತಿ ಕದಡಲು ಯತ್ನಿಸುತ್ತಿರುವ ಹಾಗೂ ಮಹಿಳಾ ಗೌರವಕ್ಕೆ ಧಕ್ಕೆ ತರುತ್ತಿರುವ ಈ ವ್ಯಕ್ತಿಯ ವಿರುದ್ಧ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಪೊಲೀಸ್ ಅಧೀಕ್ಷಕರು ಹಾಗೂ ಜಿಲ್ಲಾಧಿಕಾರಿಗಳು ತಕ್ಷಣವೇ ಅಟ್ರಾಸಿಟಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ದಲಿತ ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಅಕ್ಷಯ ಕೆ.ಆರ್., ಜಿಲ್ಲಾಧ್ಯಕ್ಷ ಮಲ್ಲಪ್ಪ ಅಕ್ಕಮಡ್ಡಿ, ಸಚೀನ ಕೋಲಕಾರ ಸೇರಿದಂತೆ ಹಲವು ದಲಿತ ಮುಖಂಡರು ಉಪಸ್ಥಿತರಿದ್ದರು.
