ಬೆಳಗಾವಿಯ ಕಣಬರ್ಗಿಯಲ್ಲಿ ಬುಡಾ ಅಧಿಕಾರಿಗಳು ಹಾಗೂ ರಾಜಕೀಯ ನಾಯಕರು ಶಾಮೀಲಾಗಿ ರೈತರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಜಮೀನು ಕಳೆದುಕೊಳ್ಳುವ ಭೀತಿಯಲ್ಲಿರುವ ಶ್ರೀ ಸಿದ್ದೇಶ್ವರ ರೈತ ಸಂಘಟನೆಯ ರೈತರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.

ಬೆಳಗಾವಿ ತಾಲೂಕಿನ ಕಣಬರ್ಗಿ ಗ್ರಾಮದ ವ್ಯಾಪ್ತಿಯಲ್ಲಿರುವ ಸುಮಾರು ೧೬೦ ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಬುಡಾ ವತಿಯಿಂದ ಕಾನೂನುಬಾಹಿರವಾಗಿ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಶ್ರೀ ಸಿದ್ದೇಶ್ವರ ರೈತ ಸಂಘಟನೆಯ ರೈತರು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಗಂಭೀರ ದೂರು ಸಲ್ಲಿಸಿದ್ದಾರೆ.
ಬುಡಾ ಕಮಿಷನರ್ ಶಕೀಲ್ ಅಹಮದ್ ಹಾಗೂ ಚೇರ್ಮನ್ ಲಕ್ಷ್ಮಣರಾವ್ ಚಿಂಗಳೆ ಅವರು ನಿಯಮಬಾಹಿರವಾಗಿ ೧೩೦ ಎಕರೆ ಜಮೀನಿಗೆ ಅಕ್ರಮವಾಗಿ ಟೆಂಡರ್ ಕರೆದಿದ್ದು, ಇದರಲ್ಲಿ ಈಗಾಗಲೇ ೩೫ ಎಕರೆ ಪ್ರದೇಶದಲ್ಲಿ ಮನೆಗಳು ಹಾಗೂ ಕೃಷಿ ಜಮೀನುಗಳಿವೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಅಲ್ಲದೆ, ೨೦೦೮ ರಿಂದ ೨೦೨೬ರ ಅವಧಿಯಲ್ಲಿ ಜಮೀನು ಮಾಫಿಯಾ ಮತ್ತು ಬಿಜೆಪಿ ಹಾಗೂ ಕಾಂಗ್ರೆಸ್ ರಾಜಕಾರಣಿಗಳು ಒಟ್ಟಾಗಿ ಸೇರಿ, ಎಕರೆಗೆ ಕೇವಲ ೧೫ ರಿಂದ ೨೦ ಲಕ್ಷ ರೂಪಾಯಿ ನೀಡಿ ಒಟ್ಟು ೭೫ ಎಕರೆ ಜಮೀನನ್ನು ಅಕ್ರಮವಾಗಿ ನೋಂದಣಿ ಮಾಡಿಕೊಂಡು ರೈತರಿಗೆ ಮೋಸ ಎಸಗಿದ್ದಾರೆ ಎಂದು ಗಂಭೀರವಾಗಿ ಆರೋಪಿಸಲಾಗಿದೆ. ಒಂದು ವೇಳೆ ಈ ಜಮೀನುಗಳನ್ನು ಬಲವಂತವಾಗಿ ಕಿತ್ತುಕೊಂಡರೆ ನಾವೆಲ್ಲರೂ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಸಿರುವ ರೈತ ಹೋರಾಟಗಾರರಾದ ಸಂಜಯ್ ಪರಶುರಾಮ್ ಇನಾಮದಾರ್, ಬಬನ್ ಮಲಾಯಿ ಸೇರಿದಂತೆ ಹಲವರು, ಈ ವಂಚನೆ ಜಾಲದ ವಿರುದ್ಧ ಪೊಲೀಸ್ ಇಲಾಖೆ ಸೂಕ್ತ ತನಿಖೆ ನಡೆಸಿ ರೈತರಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.
ಇನ್ನು ಈ ವಿಷಯದ ಮನವಿಯನ್ನು ಉತ್ತರ ಶಾಸಕ ಆಸೀಫ್ ಸೇಠ್ ಅವರಿಗೆ ಸಲ್ಲಿಸಲಾಗಿದ್ದು, ಸಮಸ್ಯೆಯಿದ್ದ ಜಮೀನುಗಳನ್ನು ಬಿಟ್ಟು, ಎಲ್ಲವೂ ಸ್ಪಷ್ಟವಿರುವ ಜಮೀನುಗಳನ್ನು ಅಭಿವೃದ್ಧಿಗೆ ಬಳಸಿಕೊಳ್ಳುವಂತೆ ಸೂಚಿಸಿದ್ದಾರೆ.
