ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನಲ್ಲಿ ಜಮೀನು ವಿವಾದದ ಹಿನ್ನೆಲೆಯಲ್ಲಿ ಭೀಕರ ಕೊಲೆಯೊಂದು ನಡೆದಿದೆ. ಮನೆಯೊಳಗೆ ನುಗ್ಗಿದ ಕಿರಾತಕನೊಬ್ಬ ಮಹಿಳೆಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಇಡೀ ಗ್ರಾಮವನ್ನು ಬೆಚ್ಚಿಬೀಳಿಸಿದೆ.


ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಹಾಳಗೋರ್ಟಾ ಗ್ರಾಮದಲ್ಲಿ ಇಂದು ಬೆಳಗ್ಗೆ ಅತ್ಯಂತ ಬರ್ಬರ ಘಟನೆಯೊಂದು ವರದಿಯಾಗಿದೆ. ಅನಿತಾ (32) ಕೊಲೆಯಾದ ದುರ್ದೈವಿ ಮಹಿಳೆಯಾಗಿದ್ದಾರೆ. ಮೃತ ಮಹಿಳೆಯು ತನ್ನ ಮನೆಯಲ್ಲಿ ಸ್ನಾನ ಮಾಡುತ್ತಿದ್ದ ಸಂದರ್ಭದಲ್ಲಿ ನುಗ್ಗಿದ ಕಿರಾತಕ, ಕೊಡಲಿಯಿಂದ ತೀವ್ರವಾಗಿ ಕೊಚ್ಚಿ ಆಕೆಯನ್ನು ಜಾಗದಲ್ಲೇ ಹತ್ಯೆ ಮಾಡಿದ್ದಾನೆ. ಜಮೀನಿನ ಹಂಚಿಕೆ ವಿಚಾರವಾಗಿ ಕಳೆದ ಕೆಲವು ಸಮಯದಿಂದ ನಡೆಯುತ್ತಿದ್ದ ಕೌಟುಂಬಿಕ ಕಲಹವೇ ಈ ಭೀಕರ ಘಟನೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮೃತ ಮಹಿಳೆಯ ಪತಿಯ ಚಿಕ್ಕಪ್ಪನ ಮಗನಾದ ಕೈಲಾಸ್ ಬಿರಾದಾರ್ ಎಂಬಾತನೇ ಈ ಕೃತ್ಯ ಎಸಗಿದ ಆರೋಪಿಯಾಗಿದ್ದಾನೆ. ಆರೋಪಿ ಕೈಲಾಸ್ ಕಳೆದ ವರ್ಷವೂ ಜಮೀನಿನ ವಿಚಾರಕ್ಕೆ ಮೃತಳ ಪತಿಯೊಂದಿಗೆ ತೀವ್ರ ಗಲಾಟೆ ಮಾಡಿಕೊಂಡಿದ್ದ ಎನ್ನಲಾಗಿದೆ. ಘಟನೆಯಿಂದಾಗಿ ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿದೆ.
ಘಟನೆ ನಡೆದ ತಕ್ಷಣ ಖಟಕಚಿಂಚೋಳಿ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಘಟನಾ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿ ಕೈಲಾಸ್ ಪತ್ತೆಗಾಗಿ ಪೊಲೀಸರು ವಿಶೇಷ ತಂಡವನ್ನು ರಚಿಸಿ ಜಾಲ ಬೀಸಿದ್ದಾರೆ.
