Chikkodi

ವಿಷಪೂರಿತ ಅಣಬೆ( ಮಶರೂಮ್ ) ಸೇವನೆ: ಒಂದೇ ಕುಟುಂಬದ ಗರ್ಭಿಣಿ ಸೇರಿ 9 ಜನ ಅಸ್ವಸ್ಥ

Share

ಹೊಲದಲ್ಲಿ ಬೆಳೆದಿದ್ದ ಅಣಬೆಯನ್ನು( ಮಶರೂಮ್) ತಂದು ಅಡುಗೆ ಮಾಡಿ ಸೇವಿಸಿದ ಪರಿಣಾಮ ಒಂದೇ ಕುಟುಂಬದ ಗರ್ಭಿಣಿ ಮಹಿಳೆ ಸೇರಿದಂತೆ ಒಟ್ಟು ಒಂಬತ್ತು ಜನ ತೀವ್ರವಾಗಿ ಅಸ್ವಸ್ಥಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದಲ್ಲಿ ನಡೆದಿದೆ.

ಅಸ್ವಸ್ಥರನ್ನು ಜಿದ್ದಿಮನಿ ಹಾಗೂ ಕೋಳಿ ಕುಟುಂಬದ ಸದಸ್ಯರೆಂದು ಗುರುತಿಸಲಾಗಿದ್ದು, ಸದ್ಯ ಇವರೆಲ್ಲರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗ್ರಾಮದ ಜಿದ್ದಿಮನಿ ಹಾಗೂ ಕೋಳಿ ಕುಟುಂಬದ ಸದಸ್ಯರು ಎಂದಿನಂತೆ ಕೆಲಸ ಮುಗಿಸಿಕೊಂಡು ಮನೆಗೆ ಹಿಂದಿರುಗುವಾಗ ಹೊಲವೊಂದರಲ್ಲಿ ಬೆಳೆದಿದ್ದ ಅಣಬೆಯನ್ನು (ಮಶರೂಮ್) ಕಿತ್ತುಕೊಂಡು ಬಂದಿದ್ದರು. ಒಂದು ಕುಟುಂಬದವರು ಅಣಬೆ ತಂದಿರುವುದನ್ನು ನೋಡಿ, ಮತ್ತೊಂದು ಕುಟುಂಬದವರೂ ಅಣಬೆಯನ್ನು ಪಡೆದು ಮನೆಯಲ್ಲಿ ಅಡುಗೆ ಮಾಡಿದ್ದರು.

ಆದರೆ, ಆ ಹೊಲದ ಮಾಲೀಕ ಇತ್ತೀಚೆಗಷ್ಟೇ ಬೆಳೆಗಳಿಗೆ ಕೀಟನಾಶಕ (ಔಷಧಿ) ಸಿಂಪಡಿಸಿದ್ದ ಎನ್ನಲಾಗಿದೆ. ಈ ವಿಷಯ ತಿಳಿಯದ ಕುಟುಂಬಸ್ಥರು ಕೀಟನಾಶಕದ ಪ್ರಭಾವವಿದ್ದ ಅಣಬೆಯನ್ನು ಬಳಸಿ ಅಡುಗೆ ಸಿದ್ಧಪಡಿಸಿ ಸವಿದಿದ್ದಾರೆ.

ಊಟ ಮುಗಿಸಿದ ಕೆಲವೇ ಸಮಯದಲ್ಲಿ ಕುಟುಂಬದ ಸದಸ್ಯರಲ್ಲಿ ತೀವ್ರವಾಗಿ ವಾಂತಿ ಹಾಗೂ ಭೇದಿ ಕಾಣಿಸಿಕೊಂಡಿದೆ. ಮನೆಯಲ್ಲೇ ಎಲ್ಲರೂ ತೀವ್ರ ಅಸ್ವಸ್ಥಗೊಂಡು ನರಳಾಡಲಾರಂಭಿಸಿದಾಗ, ತಕ್ಷಣವೇ ಸ್ಥಳೀಯರ ಸಹಾಯದಿಂದ ಎಲ್ಲ ಒಂಬತ್ತು ಜನರನ್ನು ಚಿಕ್ಕೋಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಅಸ್ವಸ್ಥರ ಪೈಕಿ ಒಬ್ಬರು ಗರ್ಭಿಣಿ ಮಹಿಳೆಯಾಗಿದ್ದು, ಅವರ ಆರೋಗ್ಯದ ಸ್ಥಿತಿಯನ್ನು ಪರಿಗಣಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.

ವಿಷಪೂರಿತ ಅಣಬೆ ಸೇವನೆಯಿಂದಾಗಿ ಇಡೀ ಕುಟುಂಬವೇ ಆಸ್ಪತ್ರೆ ಪಾಲಾಗಿದ್ದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತ್ತು. ಸದ್ಯ ಚಿಕ್ಕೋಡಿ ಹಾಗೂ ಬೆಳಗಾವಿ ಆಸ್ಪತ್ರೆಯ ವೈದ್ಯರು ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಿದ್ದು, ಚಿಕಿತ್ಸೆ ಪಡೆಯುತ್ತಿರುವ ಎಲ್ಲಾ ಒಂಬತ್ತು ರೋಗಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಚಿಕ್ಕೋಡಿ ಪೊಲೀಸ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಡಿ.ಕೆ‌‌.ಉಪ್ಪಾರ ಇನ್ ನ್ಯೂಸ್ ಚಿಕ್ಕೋಡಿ

Tags:

error: Content is protected !!