Belagavi

ವೇತನ ತಾರತಮ್ಯ, ಎಫ್‌ಆರ್‌ಎಸ್ ಕಿರುಕುಳಕ್ಕೆ ಸಿಐಟಿಯು ಆಕ್ರೋಶ:

Share

ಬೆಳಗಾವಿಯಲ್ಲಿ ಇಂದು ಸಿಐಟಿಯು ಸಂಘಟನೆಯ ನೇತೃತ್ವದಲ್ಲಿ ಅಂಗನವಾಡಿ ಹಾಗೂ ಬಿಸಿಯೂಟ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಕಪ್ಪು ದಿನಾಚರಣೆ ಆಚರಿಸಿದ ಪ್ರತಿಭಟನಾಕಾರರು, ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಅಂಗನವಾಡಿ ಹಾಗೂ ಬಿಸಿಯೂಟ ನೌಕರರು ಕಪ್ಪು ದಿನಾಚರಣೆ ಆಚರಿಸಿ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿಯನ್ನು ನಡೆಸಿದರು. ನಂತರ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ತಲುಪಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಯಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಜಿ.ಎಂ. ಜೈನಖಾನ್, ಇಂದಿನ ಕನಿಷ್ಠ ವೇತನ ಕಾಯ್ದೆಯ ಅಡಿಯಲ್ಲಿ ಅಂಗನವಾಡಿ ಹಾಗೂ ಬಿಸಿಯೂಟದ ನೌಕರರಿಗೆ ಸುಪ್ರೀಂ ಕೋರ್ಟ್ ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಮತ್ತು ಮಾಸಿಕ ₹31,000 ಕನಿಷ್ಠ ವೇತನ ನಿಗದಿಪಡಿಸಬೇಕು ಎಂದು ತೀವ್ರವಾಗಿ ಒತ್ತಾಯಿಸಿದರು. ಅಂಗನವಾಡಿ ಕೇಂದ್ರಗಳಲ್ಲಿ ಜಾರಿಗೆ ತರಲಾಗಿರುವ ಎಫ್‌ಆರ್‌ಎಸ್ (ಮುಖ ಗುರುತಿಸುವಿಕೆ) ಹಾಜರಾತಿ ವ್ಯವಸ್ಥೆಯನ್ನು ತಕ್ಷಣ ರದ್ದುಗೊಳಿಸಬೇಕು. ಏಕೆಂದರೆ ಗ್ರಾಮೀಣ ಭಾಗಗಳಲ್ಲಿ ತೀವ್ರ ನೆಟ್‌ವರ್ಕ್ ಸಮಸ್ಯೆ ಇರುವುದರಿಂದ ಬಯೋಮೆಟ್ರಿಕ್ ಹಾಜರಾತಿ ಸಾಧ್ಯವಾಗುತ್ತಿಲ್ಲ. ಆದರೆ, ಅಧಿಕಾರಿಗಳು ಇದನ್ನೇ ನೆಪವಾಗಿಟ್ಟುಕೊಂಡು ನೌಕರರಿಗೆ ನೋಟಿಸ್ ನೀಡಿ ಕಿರುಕುಳ ನೀಡುತ್ತಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದರು.ಡಿಜಿಟಲ್ ವ್ಯವಸ್ಥೆ ಜಾರಿಗೊಳಿಸುವುದಾದರೆ ಸರ್ಕಾರವೇ ಮೊದಲು ಉಚಿತ ವೈಫೈ ಸೌಲಭ್ಯ ಹಾಗೂ 5G ಮೊಬೈಲ್‌ಗಳನ್ನು ನೀಡಲಿ ಎಂದು ಆಗ್ರಹಿಸಿದ ಜೈನಖಾನ್, ನೌಕರರಿಗೆ ಬಿಎಲ್‌ಒ ಮತ್ತು ಎಸ್‌ಆರ್‌ಎ ಹೆಚ್ಚುವರಿ ಕೆಲಸಗಳನ್ನು ನೀಡುವುದನ್ನು ನಿಲ್ಲಿಸಬೇಕು ಹಾಗೂ ಸರ್ಕಾರಿ ಅಂಗನವಾಡಿಗಳಲ್ಲೇ ಎಲ್‌ಕೆಜಿ-ಯುಕೆಜಿ ತರಗತಿಗಳನ್ನು ಅಧಿಕೃತವಾಗಿ ಪ್ರಾರಂಭಿಸಬೇಕು ಎಂದರು. ಇದೇ ವೇಳೆ, ಮಕ್ಕಳ ಸಂಖ್ಯೆ ಕಡಿಮೆ ಇದೆ ಎಂಬ ನೆಪವೊಡ್ಡಿ ಬಿಸಿಯೂಟದ ನೌಕರರನ್ನು ಕೆಲಸದಿಂದ ತೆಗೆಯುವ ಕುತಂತ್ರ ನಡೆಯುತ್ತಿದೆ. ಇಂತಹ ನೌಕರರನ್ನು ಕೆಲಸದಿಂದ ವಜಾ ಮಾಡುವ ಬದಲು, ಮಕ್ಕಳ ಸಂಖ್ಯೆ ಹೆಚ್ಚಿರುವ ಕಡೆಗೆ ವರ್ಗಾವಣೆ ಮಾಡಿ ಉದ್ಯೋಗ ಭದ್ರತೆ ನೀಡಬೇಕು ಎಂದು ಸರ್ಕಾರದ ಆದೇಶಗಳನ್ನೇ ಪಾಲಿಸುವಂತೆ ಅವರು ಒತ್ತಾಯಿಸಿದರು. ದೇಶಾದ್ಯಂತ ಜೂನ್ 10 ರಂದು ಯೋಜನೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರರ ಬೇಡಿಕೆಗಳ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಈ ಬಾರಿ ಸರ್ಕಾರಗಳು ಅನುದಾನ ಕಡಿತಗೊಳಿಸಿ ಇವುಗಳನ್ನು ಖಾಸಗೀಕರಣಗೊಳಿಸಲು ಯತ್ನಿಸುತ್ತಿರುವುದನ್ನು ಖಂಡಿಸಿ ಕಪ್ಪು ದಿನಾಚರಣೆ ಆಚರಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು. ಇತ್ತೀಚಿನ ದಿನಗಳಲ್ಲಿ ಕೆಲಸದ ಹೊರೆ ಹೆಚ್ಚಾಗುತ್ತಿದೆಯೇ ಹೊರತು ಶ್ರಮಕ್ಕೆ ತಕ್ಕ ವೇತನ ಸಿಗುತ್ತಿಲ್ಲ. ಉದಾಹರಣೆಗೆ ಹಾಸ್ಟೆಲ್‌ಗಳಲ್ಲಿ ಅಡುಗೆ ಮಾಡುವವರಿಗೆ ₹12,000 ದಿಂದ ₹20,000 ವರೆಗೆ ಪಾವತಿಸಲಾಗುತ್ತಿದ್ದರೆ, ಶಾಲೆಗಳಲ್ಲಿ ಬಿಸಿಯೂಟ ತಯಾರಿಸುವ ಮಹಿಳೆಯರಿಗೆ ಕೇವಲ ₹4,600 ನೀಡಲಾಗುತ್ತಿರುವುದು ತೀವ್ರ ತಾರತಮ್ಯದಿಂದ ಕೂಡಿದೆ. ಸರ್ಕಾರ ತಕ್ಷಣವೇ ಕಾರ್ಮಿಕ ವಿರೋಧಿ ನೀತಿಗಳನ್ನು ಕೈಬಿಟ್ಟು ನೌಕರರ ಹಿತ ಕಾಯಬೇಕು ಎಂದು ಎಚ್ಚರಿಸಿದರು.

ಈ ಬೃಹತ್ ಪ್ರತಿಭಟನೆಯಲ್ಲಿ ಬೆಳಗಾವಿ ಜಿಲ್ಲೆಯ ವಿವಿಧ ತಾಲೂಕುಗಳ ನೂರಾರು ಸಿಐಟಿಯು ಮಹಿಳಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

Tags:

error: Content is protected !!