ಬೆಳಗಾವಿಯ ದೇವರಾಜ್ ಅರಸ್ ಕಾಲನಿಯಲ್ಲಿರುವ ಶ್ರೀ ನಾಗನೂರ್ ಶಿವಬಸವೇಶ್ವರ್ ಟ್ರಸ್ಟ್ ವೃದ್ಧಾಶ್ರಮದ ಆವರಣದಲ್ಲಿ ಇಂದು ಪರಿಸರ ಕಾಳಜಿಯ ಒಂದು ಶ್ಲಾಘನೀಯ ಕಾರ್ಯಕ್ರಮ ಜರುಗಿತು.


ಬೆಳಗಾವಿಯ ದೇವರಾಜ್ ಅರಸ್ ಕಾಲೋನಿಯ ಶ್ರೀ ನಾಗನೂರ್ ಶಿವಬಸವೇಶ್ವರ್ ಟ್ರಸ್ಟ್ ವೃದ್ಧಾಶ್ರಮದ ಪರಿಸರದಲ್ಲಿ ಸರ್ವ ಲೋಕ ಸೇವಾ ಫೌಂಡೇಶನ್ ಸಂಸ್ಥಾಪಕರಾದ ವಿರೇಶ್ ಬಸಯ್ಯ ಹಿರೇಮಠ್ ಹಾಗೂ ವೃದ್ಧಾಶ್ರಮದ ಮೇಲ್ವಿಚಾರಕರಾದ ಎಂ.ಎಸ್. ಚೌಗಲಾ ಅವರ ಜಂಟಿ ನೇತೃತ್ವದಲ್ಲಿ ಸಸಿ ನೆಡುವ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

ಇತ್ತೀಚೆಗೆ ಲಿಂಗೈಕ್ಯರಾದ ಚಾಣಕ್ಯ ನಾವಲಕರ ಅವರ ತಂದೆಯವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂಬ ಸದುದ್ದೇಶದಿಂದ ಅವರ ಸ್ಮರಣಾರ್ಥವಾಗಿ ವೃದ್ಧಾಶ್ರಮದ ಆವರಣದಲ್ಲಿ ಬಿಲ್ವಪತ್ರ, ಅರಳೆ, ಆಲ ಮತ್ತು ಶಮಿ (ಬನ್ನಿ) ಮುಂತಾದ ಪರಿಸರಸ್ನೇಹಿ ಹಾಗೂ ಧಾರ್ಮಿಕ ಮಹತ್ವವುಳ್ಳ ಸಸಿಗಳನ್ನು ನೆಡಲಾಯಿತು. ಈ ಮಹತ್ಕಾರ್ಯದಲ್ಲಿ ಕೇವಲ ಸಸಿಗಳನ್ನು ನೆಡುವುದಷ್ಟೇ ಅಲ್ಲದೆ, ಅವುಗಳನ್ನು ಮರಗಳಾಗಿ ಬೆಳೆಸುವ ಸಂಪೂರ್ಣ ಜವಾಬ್ದಾರಿಯನ್ನು ಸರ್ವ ಲೋಕ ಸೇವಾ ಫೌಂಡೇಶನ್ ತನ್ನ ಹೆಗಲಿಗೆ ಕೊಂಡಿದೆ. ಈ ಅರ್ಥಪೂರ್ಣ ಸೇವಾ ಕಾರ್ಯದಲ್ಲಿ ವೃದ್ಧಾಶ್ರಮದ ಅಜ್ಜ-ಅಜ್ಜಿಯಂದಿರು ಅತ್ಯಂತ ಉತ್ಸಾಹದಿಂದ ಭಾಗವಹಿಸಿ ಸಸಿಗಳಿಗೆ ನೀರುಣಿಸಿದರು. ಹಿರಿಯರು ಲಿಂಗೈಕ್ಯರಾದಾಗ ಅವರ ಸ್ಮರಣಾರ್ಥವಾಗಿ ಪ್ರತಿಯೊಬ್ಬರೂ ಸಸಿಗಳನ್ನು ನೆಟ್ಟು ಪರಿಸರ ಉಳಿಸಬೇಕು ಎಂದು ಫೌಂಡೇಶನ್ ಸಂಸ್ಥಾಪಕ ವಿರೇಶ್ ಬಸಯ್ಯ ಹಿರೇಮಠ್ ಈ ಸಂದರ್ಭದಲ್ಲಿ ಸಾರ್ವಜನಿಕರಲ್ಲಿ ವಿನಂತಿಸಿಕೊಂಡರು.
ಕಾರ್ಯಕ್ರಮದಲ್ಲಿ ಚಾಣಕ್ಯ ನಾವಲಕರ, ಲಿಂಗಯ್ಯ ಬುರ್ಲಿಕಟ್ಟಿ, ಬಾಪೂಸಾಬ್ ಅತ್ತಾರ ಹಾಗೂ ಅಲ್ಲಾಬಕ್ಷ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು ಸಾಥ್ ನೀಡಿದರು.
