ನಿಪ್ಪಾಣಿ ತಾಲೂಕಿನ ಕೊಡನಿ ಗ್ರಾಮದಲ್ಲಿ ಬುಧವಾರ ಸಂಜೆ ಸೀರೆಯ ತೂಗು ಮಂಚದಲ್ಲಿ (ಜೋಕಾಲಿ) ಆಟವಾಡುತ್ತಿದ್ದ 8ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಆಕಸ್ಮಿಕವಾಗಿ ಸೀರೆ ಕುತ್ತಿಗೆಗೆ ಬಿಗಿದು ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಸಂಭವಿಸಿದೆ.

ಮೃತ ಬಾಲಕಿಯನ್ನು ಶುಭ್ರಾ ಯುವರಾಜ್ ರಾವುತ್-ಪಾಟೀಲ (14 ವರ್ಷ) ಎಂದು ಗುರುತಿಸಲಾಗಿದೆ. ಈ ದುರ್ಘಟನೆಯಿಂದಾಗಿ ಇಡೀ ಕೊಡನಿ ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದೆ.
ಮೃತ ಶುಭ್ರಾ ಶ್ರೀಪೆವಾಡಿಯ ಶ್ರೀ ಜಿ.ಎಂ. ಸಂಕ್ಪಾಲ್ ಪ್ರೌಢಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಬುಧವಾರ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಆಡಳಿತ ಮಂಡಳಿಯು ಶಾಲೆಗಳಿಗೆ ರಜೆ ಘೋಷಿಸಿತ್ತು. ಹೀಗಾಗಿ ಶುಭ್ರಾ ತನ್ನ ಇಬ್ಬರು ತಂಗಿಯರೊಂದಿಗೆ ಮನೆಯಲ್ಲಿದ್ದಳು. ಈಕೆಯ ತಾಯಿ ಕೃಷಿ ಕೆಲಸಕ್ಕೆ ಹಾಗೂ ತಂದೆ ಹೊರಗೆ ಕೆಲಸಕ್ಕೆ ಹೋಗಿದ್ದರು. ಅಜ್ಜಿ ಪಂಢರಪುರ ಯಾತ್ರೆಗೆ ತೆರಳಿದ್ದರಿಂದ ಮನೆಯಲ್ಲಿ ಅಜ್ಜ ಮಾತ್ರ ಇದ್ದರು.
ಸಂಜೆ ವೇಳೆ ಕೆಲಸ ಮುಗಿಸಿ ಮನೆಗೆ ಬಂದಿದ್ದ ಶುಭ್ರಾ, ಮನೆಯಲ್ಲಿದ್ದ ಸೀರೆಯ ತೂಗು ಮಂಚದ (ಜೋಕಾಲಿ) ಮೇಲೆ ಕುಳಿತು ವಿಶ್ರಾಂತಿ ಪಡೆಯುತ್ತಾ ಆಟವಾಡುತ್ತಿದ್ದಳು. ಈ ಸಮಯದಲ್ಲಿ ತೂಗು ಮಂಚವು ಜೋರಾಗಿ ತಿರುಗಿದ (ತಿರುಚಿಕೊಂಡ) ಪರಿಣಾಮ, ಸೀರೆಯ ಭಾಗ ಅವಳ ಕುತ್ತಿಗೆಗೆ ಬಲವಾಗಿ ಸಿಲುಕಿಕೊಂಡಿದೆ. ಈ ವೇಳೆ ಆಕೆಯ ಕಾಲುಗಳು ನೆಲಕ್ಕೆ ಸಿಗದ ಕಾರಣ, ಸೀರೆ ಮತ್ತಷ್ಟು ಬಿಗಿಗೊಂಡಿದೆ.
ಇದನ್ನು ಗಮನಿಸಿದ ಆಕೆಯ ಅಜ್ಜ ತಕ್ಷಣವೇ ಜೋರಾಗಿ ಕಿರುಚಾಡಿದ್ದಾರೆ. ಅಜ್ಜನ ಕೂಗನ್ನು ಕೇಳಿ ಓಡಿ ಬಂದ ನೆರೆಹೊರೆಯವರು ತಕ್ಷಣವೇ ಬಾಲಕಿಯನ್ನು ನಿಪ್ಪಾಣಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ದುರದೃಷ್ಟವಶಾತ ಚಿಕಿತ್ಸೆ ಆರಂಭಿಸುವ ಮುನ್ನವೇ ಬಾಲಕಿ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಡರಾತ್ರಿಯವರೆಗೆ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸುವ ಪ್ರಕ್ರಿಯೆ ನಡೆದಿತ್ತು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸರ್ಕಾರಿ ಮಹಾತ್ಮ ಗಾಂಧಿ ಆಸ್ಪತ್ರೆಗೆ ರವಾನಿಸಲಾಗಿದೆ.
ಮೃತ ವಿದ್ಯಾರ್ಥಿನಿ ಶುಭ್ರಾ ತಂದೆ, ತಾಯಿ, ಇಬ್ಬರು ಸಹೋದರಿಯರು, ಅಜ್ಜ, ಅಜ್ಜಿ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾಳೆ. ಆಟದ ಅವಧಿಯಲ್ಲಿ ನಡೆದ ಈ ಭೀಕರ ಅಪಘಾತದಲ್ಲಿ ಅಮಾಯಕ ಬಾಲಕಿ ಪ್ರಾಣ ಕಳೆದುಕೊಂಡಿರುವುದು ಜನರನ್ನು ಕಣ್ಣೀರಲ್ಲಿ ಮುಳುಗಿಸಿದೆ.
