ಕಳೆದ ಕೆಲವು ದಿನಗಳಿಂದ ಮುಂಗಾರು ಮಳೆ ಅಬ್ಬರ ಮುಂದುವರಿದಿದ್ದು, ಬೆಳಗಾವಿ ಜಿಲ್ಲೆಯ ನದಿಗಳಲ್ಲಿ ನೀರಿನ ಮಟ್ಟ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಕೃಷ್ಣಾ ನದಿಯ ನೀರಿನ ಒಳಹರಿವು ತೀವ್ರವಾಗಿ ಹೆಚ್ಚಾಗಿರುವುದರಿಂದ, ರಾಯಬಾಗ ಮತ್ತು ಕಾಗವಾಡ ತಾಲೂಕನ್ನು ಸಂಪರ್ಕಿಸುವ ಕುಡಚಿ -ಉಗಾರ ಸೇತುವೆ ಜಲಾವೃತಗೊಂಡಿದೆ.


ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ರಾಯಬಾಗ ತಾಲೂಕಿನ ಕುಡಚಿ ಹಾಗೂ ಕಾಗವಾಡ ತಾಲೂಕಿನ ಉಗಾರ ನಡುವಿನ ಪ್ರಮುಖ ಸೇತುವೆಯು ಸಂಪೂರ್ಣವಾಗಿ ಜಲಾವೃತಗೊಂಡಿದೆ. ಈ ಸೇತುವೆಯು ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವಿನ ಪ್ರಮುಖ ಸಾರಿಗೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿತ್ತು. ಸದ್ಯ ಸೇತುವೆಯ ಮೇಲೆ ನೀರು ಹರಿಯುತ್ತಿರುವುದರಿಂದ ಉಭಯ ರಾಜ್ಯಗಳ ನಡುವಿನ ರಸ್ತೆ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ.
ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದುಬರುತ್ತಿದೆ. ಇದರಿಂದಾಗಿ ಕುಡಚಿ – ಉಗಾರ ಸೇತುವೆ ಮುಳುಗಡೆಯಾಗಿದ್ದು, ಎರಡೂ ಬದಿಗಳಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಸ್ಥಳಕ್ಕೆ ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
