State

ಡಿಸಿಎಂ ಪರಮೇಶ್ವರ್ ತೀಕ್ಷ್ಣ ಪ್ರತಿಕ್ರಿಯೆ: ಎಸ್‌ಐಆರ್‌ನಲ್ಲಿ ಸರ್ಕಾರದ ಪಾತ್ರವಿಲ್ಲ; ಹೇಮಾವತಿ ಕೆನಾಲ್ ಕಾಮಗಾರಿ ನಿಲ್ಲಲ್ಲ!

Share

ತುಮಕೂರಿನಲ್ಲಿ ಎಸ್‌ಐಆರ್ ಸಮೀಕ್ಷೆ ವಿರೋಧಿಸುತ್ತಿರುವ ಮೈತ್ರಿ ಪಕ್ಷಗಳಿಗೆ ಸಚಿವ ಡಾ. ಜಿ. ಪರಮೇಶ್ವರ್ ತಿರುಗೇಟು ನೀಡಿದ್ದಾರೆ. ಎಸ್‌ಐಆರ್ ಪ್ರಕ್ರಿಯೆ ಸಂಪೂರ್ಣವಾಗಿ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ನಡೆಯುತ್ತಿದ್ದು, ಇದರಲ್ಲಿ ಸರ್ಕಾರದ ಪಾತ್ರವಿಲ್ಲ ಹಾಗೂ ಹೇಮಾವತಿ ಲಿಂಕ್ ಎಕ್ಸ್‌ಪ್ರೆಸ್ ಕೆನಾಲ್ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮೈತ್ರಿ ಪಕ್ಷಗಳು ಎಸ್‌ಐಆರ್ ಸಮೀಕ್ಷೆಯನ್ನು ವಿರೋಧಿಸಿ ಚುನಾವಣಾ ಆಯೋಗಕ್ಕೆ ದೂರು ನೀಡಿರುವ ಕುರಿತು ತುಮಕೂರಿನಲ್ಲಿ ಮಾತನಾಡಿದ ಡಾ. ಜಿ. ಪರಮೇಶ್ವರ್, ಇಡೀ ಪ್ರಕ್ರಿಯೆ ಇಸಿ (EC) ಗೈಡ್‌ಲೈನ್ಸ್ ಪ್ರಕಾರವೇ ನಡೆಯುತ್ತಿದೆ ಎಂದರು. ಒಂದು ವೇಳೆ ಎಲ್ಲಾದರೂ ನಿಯಮಗಳ ಉಲ್ಲಂಘನೆಯಾಗಿದ್ದರೆ ಅದನ್ನು ಚುನಾವಣಾ ಆಯೋಗವೇ ಗಮನಿಸಿ ಕ್ರಮ ಕೈಗೊಳ್ಳುತ್ತದೆ. ಇದರಲ್ಲಿ ರಾಜ್ಯ ಸರ್ಕಾರ ಯಾವುದೇ ರೀತಿಯಲ್ಲೂ ಭಾಗಿಯಾಗಿಲ್ಲ ಮತ್ತು ನಾವು ಯಾರಿಗೂ ಯಾವುದೇ ಸೂಚನೆ ಕೊಟ್ಟಿಲ್ಲ. ಆಯೋಗದ ಸಿಬ್ಬಂದಿ ಕೇಳಿದ್ದಕ್ಕೆ ನಾವು ಕೇವಲ ಸಿಬ್ಬಂದಿ ನೆರವು ನೀಡಿದ್ದೇವೆ ಅಷ್ಟೇ. ಬಿಎಲ್‌ಒಗಳು ಮನೆ ಮನೆಗೆ ಹೋಗಿ ಫಾರಂ ಪಡೆದುಕೊಳ್ಳಬೇಕು, ಒಂದು ವೇಳೆ ಅವರು ಒಂದೇ ಕಡೆ ಕುಳಿತು ತಪ್ಪು ಮಾಡುತ್ತಿದ್ದರೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಿ, ನಮ್ಮ ಅಭ್ಯಂತರವಿಲ್ಲ. ಚುನಾವಣಾ ಆಯೋಗ ಸ್ವತಂತ್ರ ಸಂಸ್ಥೆಯಾಗಿದ್ದು, ಮೈತ್ರಿ ಪಕ್ಷಗಳು ನೀಡಿರುವ ದೂರನ್ನು ಅವರೇ ಪರೀಕ್ಷಿಸಲಿ, ನಾವು ಇದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ದೋಸ್ತಿ ನಾಯಕರಿಗೆ ಟಾಂಗ್ ನೀಡಿದರು.

ಇದೇ ವೇಳೆ ಜಿಲ್ಲೆಯ ಪ್ರಮುಖ ಯೋಜನೆಯಾದ ಹೇಮಾವತಿ ಲಿಂಕ್ ಎಕ್ಸ್‌ಪ್ರೆಸ್ ಕೆನಾಲ್ ವಿವಾದದ ಕುರಿತು ಮಾತನಾಡಿದ ಅವರು, ಈ ಯೋಜನೆಗೆ ಸರ್ಕಾರ ಈಗಾಗಲೇ ತೀರ್ಮಾನ ಕೈಗೊಂಡು 900 ಕೋಟಿಗೂ ಅಧಿಕ ಹಣ ಬಿಡುಗಡೆ ಮಾಡಿದೆ ಎಂದರು. ಈಗಾಗಲೇ ಸಾಕಷ್ಟು ಹಣ ಖರ್ಚಾಗಿದ್ದು, ಈಗ ಈ ಕಾಮಗಾರಿಯನ್ನು ನಿಲ್ಲಿಸಬೇಕು ಎಂದರೆ ಅದು ಸಾಧ್ಯವೇ ಇಲ್ಲ, ಸರ್ಕಾರ ಈ ಯೋಜನೆಯನ್ನು ಮುಂದುವರಿಸಿಯೇ ತೀರುತ್ತದೆ ಎಂದು ಸ್ಪಷ್ಟಪಡಿಸಿದರು. ಲಿಂಕ್ ಕೆನಾಲ್‌ನಿಂದಾಗಿ ಯಾವುದೇ ಜಿಲ್ಲೆಯ ಹಿತಾಸಕ್ತಿಯನ್ನು ಬಲಿ ಕೊಟ್ಟಿಲ್ಲ. ಕುಣಿಗಲ್ ತಾಲೂಕು ನಮ್ಮದೇ ಜಿಲ್ಲೆಯಲ್ಲಿದೆ, ಹೀಗಾಗಿ ಕುಣಿಗಲ್‌ಗೆ ಹೋಗುವ ಹಳೆಯ ನಾಲೆಯನ್ನು ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ. ಹಳೇ ನಾಲೆ ಹಾಗೇ ಇರಲಿದ್ದು, ಹೊಸ ಲಿಂಕ್ ಕೆನಾಲ್ ಯೋಜನೆ ಕೂಡ ಯಶಸ್ವಿಯಾಗಿ ಸಾಗಲಿದೆ ಎಂದು ಜಿಲ್ಲೆಯ ಜನರಿಗೆ ಭರವಸೆ ನೀಡಿದರು.

Tags:

error: Content is protected !!