ಬೆಳಗಾವಿ ಜಿಲ್ಲೆಯ ಎಂ.ಕೆ.ಹುಬ್ಬಳ್ಳಿಯ ಕಲ್ಮೇಶ್ವರ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗಲು ದಾರಿಯಿಲ್ಲದೆ ಪರದಾಡುವಂತಾಗಿದೆ. ಪಕ್ಕದಲ್ಲೇ ಪಟ್ಟಣ ಪಂಚಾಯತಿ ಕಚೇರಿ ಇದ್ದರೂ ಅಧಿಕಾರಿಗಳು ಮಾತ್ರ ಕಣ್ಣು ಮುಚ್ಚಿ ಕುಳಿತಿದ್ದು, ಕೇಳಲು ಹೋದ ಸಾರ್ವಜನಿಕರಿಗೆ ಬೇಜವಾಬ್ದಾರಿಯ ಉತ್ತರ ನೀಡಿ ಉಡಾಫೆ ಪ್ರದರ್ಶಿಸುತ್ತಿದ್ದಾರೆ.

ಎಂ.ಕೆ.ಹುಬ್ಬಳ್ಳಿಯ ಐತಿಹಾಸಿಕ ಕಲ್ಮೇಶ್ವರ ಹೈಸ್ಕೂಲ್ ಮುಂಭಾಗದ ರಸ್ತೆ ಸಂಪೂರ್ಣ ಕೆಸರುಗದ್ದೆಯಾಗಿ ಮಾರ್ಪಟ್ಟಿದ್ದು, ನಿತ್ಯ ನೂರಾರು ವಿದ್ಯಾರ್ಥಿಗಳು ಜೀವ ಕೈಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಯುದ್ದಕ್ಕೂ ಚರಂಡಿ ನೀರು ಹಾಗೂ ಮಳೆ ನೀರು ನಿಂತು ಹೊಂಡ ಉಂಟಾಗಿರುವುದರಿಂದ, ವಿದ್ಯಾರ್ಥಿಗಳು ಅನಿವಾರ್ಯವಾಗಿ ರಸ್ತೆ ಬಿಟ್ಟು ಪಕ್ಕದ ಮನೆಯವರ ಹಿತ್ತಲ ಕಡೆಯಿಂದ ಶಾಲೆಗೆ ಹೋಗುತ್ತಿದ್ದಾರೆ. ಹತ್ತಿರದಲ್ಲೇ ಪಟ್ಟಣ ಪಂಚಾಯತಿ ಕಾರ್ಯಾಲಯವಿದ್ದರೂ, ಕಣ್ಣೆದುರೇ ವಿದ್ಯಾರ್ಥಿಗಳು ಪಡುತ್ತಿರುವ ಕಷ್ಟವನ್ನು ಅಧಿಕಾರಿಗಳು ಮಾತ್ರ ತಿರುಗಿಯೂ ನೋಡುತ್ತಿಲ್ಲ. ಪಂಚಾಯತಿ ಕಣ್ಣಳತೆಯಲ್ಲೇ ಇಂತಹ ದುಃಸ್ಥಿತಿ ಇದ್ದರೆ, ಇನ್ನು ಇಡೀ ಊರಿನ ವಾರ್ಡ್ಗಳ ಸಮಸ್ಯೆಗಳನ್ನು ಇವರು ಹೇಗೆ ಬಗೆಹರಿಸುತ್ತಾರೆ ಎಂದು ಸ್ಥಳೀಯ ಗ್ರಾಮಸ್ಥರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಈ ನರಕಸದೃಶ ರಸ್ತೆಯ ಕುರಿತು ಸ್ಥಳೀಯ ಸಾರ್ವಜನಿಕರು ಹಾಗೂ ಶಾಲಾ ಸಿಬ್ಬಂದಿ ಹಲವು ಬಾರಿ ಪಟ್ಟಣ ಪಂಚಾಯತಿಗೆ ಅಲೆದು ದೂರು ನೀಡಿದ್ದಾರೆ. ಆದರೆ ಸಮಸ್ಯೆ ಬಗೆಹರಿಸಬೇಕಾದ ಅಧಿಕಾರಿಗಳು, “ಇದು ರಾಷ್ಟ್ರೀಯ ಹೆದ್ದಾರಿ (NH) ಇಲಾಖೆಗೆ ಸಂಬಂಧಪಟ್ಟ ವಿಷಯ, ಇಲ್ಲಿ ನಮಗೆ ಚರಂಡಿ ಮಾಡಲು ಅವಕಾಶವಿಲ್ಲ” ಎಂದು ಉಡಾಫೆಯ ಉತ್ತರ ನೀಡಿ ಜಾರಿಕೊಳ್ಳುತ್ತಿದ್ದಾರೆ. ಹೆದ್ದಾರಿ ಪ್ರಾಧಿಕಾರದ ನೆಪ ಹೇಳಿ ಶಾಲಾ ಮಕ್ಕಳ ಭವಿಷ್ಯ ಹಾಗೂ ಆರೋಗ್ಯದ ಜೊತೆ ಆಟವಾಡುತ್ತಿರುವ ಪಂಚಾಯತಿ ಆಡಳಿತದ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇನ್ನಾದರೂ ಉನ್ನತ ಅಧಿಕಾರಿಗಳು ಎಚ್ಚೆತ್ತುಕೊಂಡು ವಿದ್ಯಾರ್ಥಿಗಳ ಸುಗಮ ಸಂಚಾರಕ್ಕೆ ತಕ್ಷಣ ತಾತ್ಕಾಲಿಕ ರಸ್ತೆಯನ್ನಾದರೂ ನಿರ್ಮಿಸಿಕೊಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
