ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಲಾಲವಾಡಿ ಬಳಿ ಭೀಕರ ಗಾಳಿ-ಮಳೆಗೆ ಬೃಹತ್ ಆಕಾರದ ಮರವೊಂದು ರಾಜ್ಯ ಹೆದ್ದಾರಿಗೆ ಉರುಳಿ ಬಿದ್ದು ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ವಿಷಯ ತಿಳಿಯುತ್ತಿದ್ದಂತೆ ಅಲರ್ಟ್ ಆದ ಅರಣ್ಯ ಇಲಾಖೆ ಅಧಿಕಾರಿಗಳು, ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ ನಡೆಸಿ ಮರವನ್ನು ತೆರವುಗೊಳಿಸುವ ಮೂಲಕ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.


ಖಾನಾಪುರ ತಾಲೂಕಿನ ಲಾಲವಾಡಿ ಗ್ರಾಮದ ಬಳಿ ಹಾದುಹೋಗುವ ಖಾನಾಪುರ-ಹಳಿಯಾಳ ರಾಜ್ಯ ಹೆದ್ದಾರಿಯಲ್ಲಿ ಬೀಸಿದ ಭೀಕರ ಬಿರುಗಾಳಿ ಹಾಗೂ ಮಳೆಗೆ ಬೃಹತ್ ಆಕಾರದ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದರಿಂದ ಮುಖ್ಯ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿತ್ತು. ಘಟನೆಯ ಗಂಭೀರತೆ ಅರಿತ ಖಾನಾಪುರ ಎಸಿಎಫ್ ಬಸವರಾಜ ವಾಳದ ಹಾಗೂ ಆರ್ಎಫ್ಒ ಶ್ರೀಕಾಂತ್ ಪಾಟೀಲ್ ಅವರು ತಕ್ಷಣವೇ ಕಾರ್ಯಪ್ರವೃತ್ತರಾಗಿ, ನಂದಗಡ ಉಪ ವಲಯ ಅರಣ್ಯಾಧಿಕಾರಿ ಮಾಧುರಿ ದಳವಾಯಿ ಅವರ ನೇತೃತ್ವದ ವಿಶೇಷ ತಂಡವನ್ನು ಸ್ಥಳಕ್ಕೆ ಕಳುಹಿಸಿಕೊಟ್ಟರು. ಅರಣ್ಯ ಇಲಾಖೆಯ ಸಿಬ್ಬಂದಿ ಅತ್ಯಂತ ವೇಗವಾಗಿ ಕಾರ್ಯಾಚರಣೆ ನಡೆಸಿ, ಹೆದ್ದಾರಿಗೆ ಅಡ್ಡಲಾಗಿದ್ದ ಬೃಹತ್ ಮರವನ್ನು ಕತ್ತರಿಸಿ ರಸ್ತೆಯ ಪಕ್ಕಕ್ಕೆ ಸರಿಸುವ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು. ಬಿರುಗಾಳಿಗೆ ಮರಗಳು ಉರುಳುವ ಇಂತಹ ಆಪತ್ತಿನ ಸಮಯದಲ್ಲಿ ಅರಣ್ಯ ಇಲಾಖೆಯು ತೋರಿದ ಕ್ಷಿಪ್ರ ಸ್ಪಂದನೆಗೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ. ಈ ಯಶಸ್ವಿ ತೆರವು ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಮಾಧುರಿ ದಳವಾಯಿ ಸೇರಿದಂತೆ ಅರಣ್ಯ ಇಲಾಖೆಯ ಇತರೆ ಸಿಬ್ಬಂದಿ ವರ್ಗದವರು ಶ್ರಮಿಸಿದ್ದಾರೆ.
