Kagawad

ಕೃಷ್ಣಾ ನದಿ ತೀರದ ಏತ ನೀರಾವರಿ ಜಾಕ್‌ವೆಲ್ ಕುಸಿತ: ೪ ಕೋಟಿ ನಷ್ಟ, ರೈತರ ಆಕ್ರೋಶ

Share

ಸರ್ಕಾರದ ಯಾವುದೇ ಆರ್ಥಿಕ ನೆರವು ಪಡೆಯದೇ, ಬ್ಯಾಂಕ್‌ಗಳಲ್ಲಿ ಸಾಲ ಪಡೆದು ರೈತರು ನಿರ್ಮಿಸಿಕೊಂಡಿದ್ದ ಏತ ನೀರಾವರಿ ಯೋಜನೆಯ ಜಾಕ್‌ವೆಲ್, ಅಮೃತ್–೨ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ವೇಳೆ ಕುಸಿದು ಬಿದ್ದಿದೆ. ಇದರ ಪರಿಣಾಮವಾಗಿ ಸುಮಾರು ೪ ಕೋಟಿ ರೂಪಾಯಿ ಮೌಲ್ಯದ ನಷ್ಟ ಸಂಭವಿಸಿದ್ದು, ಸುಮಾರು ೫೦೦ ರೈತ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ರೈತರು ಆರೋಪಿಸಿದ್ದಾರೆ.

ಸೋಮವಾರ ಮಧ್ಯಾಹ್ನ ಕೃಷ್ಣಾ ನದಿ ತೀರದಲ್ಲಿ ರಾಜ್ಯ ಸರ್ಕಾರದ ಅಮೃತ್–೨ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ನಡೆಯುತ್ತಿರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಸುಮಾರು ೩೦ ವರ್ಷಗಳ ಹಿಂದೆ ಶೇಡಬಾಳದ ಶಾಂತಿನಾಥ್ ಹಾಗೂ ಕೃಷ್ಣಾ ಏತ ನೀರಾವರಿ ಯೋಜನೆ ಅಡಿಯಲ್ಲಿ ನಿರ್ಮಿಸಲಾಗಿದ್ದ ಜಾಕ್‌ವೆಲ್ ಮೂಲಕ ಸುಮಾರು ೧,೦೦೦ ಎಕರೆ ಕೃಷಿ ಭೂಮಿಗೆ ಪಂಪ್‌ಸೆಟ್‌ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿತ್ತು.

ಆದರೆ, ಇದೇ ಜಾಕ್‌ವೆಲ್ ಪಕ್ಕದಲ್ಲಿ ಅಮೃತ್–೨ ಯೋಜನೆಯ ಕಾಮಗಾರಿ ನಡೆಸುವ ವೇಳೆ ಅಗೆತ ಮತ್ತು ಬ್ಲಾಸ್ಟಿಂಗ್ ಕಾರ್ಯ ಕೈಗೊಳ್ಳಲಾಗಿದೆ. ಇದರಿಂದ ಜಾಕ್‌ವೆಲ್‌ಗೆ ಹಾನಿಯಾಗುವ ಸಾಧ್ಯತೆ ಇದೆ ಎಂದು ರೈತರು ಈ ಹಿಂದೆ ಅಧಿಕಾರಿಗಳಿಗೆ ಲಿಖಿತ ಹಾಗೂ ಮೌಖಿಕವಾಗಿ ಮಾಹಿತಿ ನೀಡಿದ್ದರೂ, ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಇದರ ಪರಿಣಾಮವಾಗಿ ಜಾಕ್‌ವೆಲ್ ಸಂಪೂರ್ಣವಾಗಿ ಕುಸಿದು ಬಿದ್ದಿದ್ದು, ೭೫ ಅಶ್ವಶಕ್ತಿಯ ನಾಲ್ಕು ಪಂಪ್‌ಸೆಟ್‌ಗಳು, ವಿದ್ಯುತ್ ಕಂಬಗಳು ಹಾಗೂ ವಿದ್ಯುತ್ ತಂತಿಗಳು ಹಾನಿಗೊಳಗಾಗಿವೆ. ಸುರಕ್ಷತೆಯ ದೃಷ್ಟಿಯಿಂದ ಸದ್ಯ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿದೆ.

ಘಟನೆ ನಡೆದ ಬಳಿಕ ಕಾಮಗಾರಿ ನಿರ್ವಹಿಸುತ್ತಿದ್ದ ಅಧಿಕಾರಿಗಳು ಸ್ಥಳದಿಂದ ನಿರ್ಗಮಿಸಿದ್ದು, ಆ ನಂತರ ರೈತರು ಸ್ಥಳಕ್ಕೆ ಆಗಮಿಸಿ ಹಾನಿಯನ್ನು ಪರಿಶೀಲಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ಶಾಂತಿನಾಥ್ ನೀರಾವರಿ ಯೋಜನೆಯ ಅಧ್ಯಕ್ಷ ಅಣ್ಣಾ ಅರವಾಡೆ, ಕೃಷ್ಣಾ ರೈತ ಸೇವಾ ಸಂಘದ ಅಧ್ಯಕ್ಷ ರಾಜು ನಾಂದ್ರೆ, ನಿರ್ದೇಶಕರಾದ ಕುಮಾರ ಪಾಟೀಲ, ಕುಂತಿನಾಥ ಮಾಲಗಾವೆ, ಭರತ್ ಪಾಟೀಲ, ರಾಜು ಎಂದಗೌಡರ, ಅರುಣ್ ಎಂದಗೌಡರ, ಶೀತಲ್ ಮುಗಳೋಳಿ, ಪೋಪಟ್ ನಾಂದ್ರೆ, ಇರಿಗೇಶನ್ ಚಾಲಕ ಬಸಪ್ಪ ಬಾವುಲಿ ಹಾಗೂ ಬಾಳು ಚಮ್ಕೇರಿ ಸೇರಿದಂತೆ ಹಲವು ರೈತರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ರಾಜ್ಯ ಸರ್ಕಾರದ ನೀರಾವರಿ ಇಲಾಖೆ, ಜಿಲ್ಲೆಯ ಸಚಿವರು ಹಾಗೂ ಶಾಸಕರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಹಾನಿಯ ಮೌಲ್ಯಮಾಪನ ನಡೆಸಬೇಕು. ಸಂಕಷ್ಟದಲ್ಲಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

– ಸುಕುಮಾರ್ ಬನ್ನೂರೆ, ಇನ್ ನ್ಯೂಸ್, ಕಾಗವಾಡ

Tags:

error: Content is protected !!