hubbali

ಹಾವೇರಿ ಜಿಲ್ಲೆಯಾದ್ಯಂತ ಮೂರು ದಿನಗಳ ಕಾಲ ಮೋಡ ಬಿತ್ತನೆ : ಸಚಿವ ಸತೀಶ ಜಾರಕಿಹೊಳಿ

Share

ಹಾವೇರಿ ಜಿಲ್ಲೆಯ ಎಲ್ಲಾ ಶಾಸಕರು ಮೋಡ ಬಿತ್ತನೆಗೆ ಮುಂದಾಗಿದ್ದಾರೆ. ಹಾವೇರಿ ಜಿಲ್ಲೆಯಾದ್ಯಂತ ಮೂರು ದಿನಗಳ ಕಾಲ ಮೋಡ ಬಿತ್ತನೆ ಮಾಡಲಾಗುವುದು ಎಂದು ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಅವರು ತಿಳಿಸಿದರು.

ಇಂದು ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮೋಡ ಬಿತ್ತನೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ವಾಡಿಕೆಗಿಂತ ಮಳೆ ಕಡಿಮೆಯಾಗಿದೆ.
ಮಳೆ ಕೊರತೆ ಉಂಟಾಗಿರುವುದರಿಂದ ಮೋಡ ಬಿತ್ತನೆ ಮಾಡಲಾಗುತ್ತಿದೆ.‌ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮೋಡ ಬಿತ್ತನೆ ಮಾಡುವ ಬಗ್ಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಮನವಿ ಮಾಡಲಾಗುವುದು ಎಂದು ಅವರು ತಿಳಿಸಿದರು.

ಮುಂಗಾರು ಮಳೆ ಕೊರತೆಯಿಂದ ರೈತರ ಬೆಳೆಗಳಿಗೆ ಹಾನಿಯಾಗಿದೆ. ಮುಂಗಾರು ಬೆಳೆ ಹಾನಿ ಕುರಿತು ಸರ್ವೇ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮೋಡ ಬಿತ್ತನೆಗೆ ಮುಂದಾಗಿರುವ ಎಲ್ಲಾ ಶಾಸಕರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಅವರು ತಿಳಿಸಿದರು.

ಶಾಸಕರಾದ ಎಚ್.ಕೆ.ಪಾಟೀಲ ಮಾತನಾಡಿ, ರೈತರಿಗೆ ಬಂದಂತಹ ಬರಗಾಲ ಪರಿಸ್ಥಿತಿಯನ್ನು ಅರಿತು ಮೋಡ ಬಿತ್ತನೆಗೆ ಮುಂದಾಗಿದ್ದೇವೆ. ವೈಜ್ಞಾನಿಕ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಮೋಡ ಬಿತ್ತನೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಮೋಡ ಬಿತ್ತನೆ ಯಶಸ್ವಿಯಾಗಲಿದೆ. ರೈತರ ಬವಣೆ, ಸಂಕಷ್ಟ ನಿವಾರಣೆಯಾಗುವ ವಿಶ್ವಾಸವಿದೆ. ಮಳೆ‌ ಕೊರತೆ ಪರಿಸ್ಥಿತಿಯನ್ನು ಅರಿತುಕೊಂಡು ಸರ್ಕಾರ ಕೂಡ ತಕ್ಷಣ ಮೋಡ ಬಿತ್ತನೆಗೆ ಮುಂದಾಗಬೇಕು. ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಮಳೆಯಾಗಿಲ್ಲ. ವಿವಿಧ ಜಿಲ್ಲೆಗಳಲ್ಲಿ ಮೋಡ ಬಿತ್ತನೆ ಮಾಡುವ ಬಗ್ಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಒತ್ತಾಯ ಮಾಡಲಾಗುವುದು ಎಂದರು.

ರೈತರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಈ ಹಿಂದೆ 2001 ಹಾಗೂ 2017 ರಲ್ಲಿ ಮೋಡ ಬಿತ್ತನೆ ಮಾಡಲಾಗಿತ್ತು. ಈ ಹಿಂದಿನ ಮೋಡ ಬಿತ್ತನೆ ಕಾರ್ಯ ಯಶಸ್ವಿಯಾಗಿತ್ತು ಎಂದು ಅವರು ಹೇಳಿದರು.‌

ಈ ಸಂದರ್ಭದಲ್ಲಿ ಶಾಸಕರಾದ ರುದ್ರಪ್ಪ‌ ಲಮಾಣಿ, ಯಾಸೀರ ಖಾನ್ ಪಠಾಣ, ಎಫ್.ಹೆಚ್.ಜಕ್ಕಪ್ಪನವರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:

error: Content is protected !!