Belagavi

ಬೆಳಗಾವಿ ಜಿಲ್ಲೆಯ ಪ್ರಮುಖ ಜಲಪಾತಗಳು ಸದ್ಯ ಬಂದ್!!!

Share

ಬೆಳಗಾವಿ ಜಿಲ್ಲೆಯ ಖಾನಾಪುರ ಸೇರಿದಂತೆ ವಿವಿಧೆಡೆ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಪ್ರಮುಖ ಜಲಪಾತಗಳ ಅರಣ್ಯ ಮಾರ್ಗಗಳನ್ನು ಬಂದ್ ಮಾಡಿ, ಪ್ರವಾಸಿಗರ ಭೇಟಿಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ. ಜಿಲ್ಲೆಯ ನದಿಗಳಲ್ಲಿ ಒಳಹರಿವು ಹೆಚ್ಚಾಗಿದ್ದು, ಸಾರ್ವಜನಿಕರು ಹಾಗೂ ಪ್ರವಾಸಿಗರು ನದಿ ತೀರಕ್ಕೆ ತೆರಳದಂತೆ ಮತ್ತು ಜಲಪಾತಗಳಲ್ಲಿ ರೀಲ್ಸ್ ಹಾಗೂ ಸಾಹಸಕ್ಕೆ ಕೈಹಾಕದಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.

ಕಳೆದ 24 ರಿಂದ 48 ಗಂಟೆಗಳಲ್ಲಿ ಬೆಳಗಾವಿ ಜಿಲ್ಲೆಯ ಅಥಣಿ, ಚಿಕ್ಕೋಡಿ, ಹುಕ್ಕೇರಿ, ರಾಯಬಾಗ, ಸವದತ್ತಿ, ಕಿತ್ತೂರು, ನಿಪ್ಪಾಣಿ ಹಾಗೂ ಕಾಗವಾಡ ಭಾಗಗಳಲ್ಲಿ 200 ರಿಂದ 400 ಎಂಎಂನಷ್ಟು ಭಾರಿ ಮಳೆಯಾಗಿದ್ದು, ಹಲವೆಡೆ ಹಾನಿ ಸಂಭವಿಸಿದೆ. ಮಹಾರಾಷ್ಟ್ರ ಹಾಗೂ ಸ್ಥಳೀಯ ಮಳೆಯಿಂದಾಗಿ ಕೃಷ್ಣಾ ನದಿಗೆ ರಾಜಾಪುರ ಬ್ಯಾರೇಜ್ ಮೂಲಕ 59,857 ಕ್ಯೂಸೆಕ್ ನೀರು ಹರಿದುಬರುತ್ತಿದ್ದು, ದೂದ್‌ಗಂಗಾ ಮತ್ತು ವೇದಗಂಗಾ ನದಿಗಳ 17,000 ಕ್ಯೂಸೆಕ್ ಸೇರಿದಂತೆ ಒಟ್ಟು ನೀರು ಹಿಪ್ಪರಗಿ ಜಲಾಶಯದಲ್ಲಿ (ಪ್ರಸ್ತುತ ಸಂಗ್ರಹ 1.54 ಟಿಎಂಸಿ) ಸಂಗ್ರಹವಾಗುತ್ತಿದೆ. ಇನ್ನು ಘಟಪ್ರಭಾ ನದಿಯ ಹಿಡಕಲ್ ಜಲಾಶಯಕ್ಕೆ 14,143 ಕ್ಯೂಸೆಕ್ ಒಳಹರಿವು ದಾಖಲಾಗಿದ್ದರೆ, ಲೋಳಸೂರ ಸೇತುವೆಯ ಗೇಜ್‌ನಲ್ಲಿ 8,580 ಕ್ಯೂಸೆಕ್ ನೀರು ಗೋಕಾಕ್ ಜಲಪಾತದ ಕಡೆಗೆ ಹರಿಯುತ್ತಿದ್ದು, ಮಲಪ್ರಭಾ ನದಿಯಲ್ಲೂ 2,069 ಕ್ಯೂಸೆಕ್‌ನಷ್ಟು ಒಳಹರಿವು ಕಂಡುಬಂದಿದೆ. ಭಾರಿ ಮಳೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಚಿಕ್ಲೆ ಫಾಲ್ಸ್, ಪರವಾಡ ಫಾಲ್ಸ್, ವಜ್ರಪೋಹ ಫಾಲ್ಸ್ ಹಾಗೂ ಡೆಲ್ಟಾ ಫಾಲ್ಸ್‌ಗೆ ತೆರಳುವ ಅರಣ್ಯ ಮಾರ್ಗಗಳನ್ನು ಸದ್ಯಕ್ಕೆ ಬಂದ್ ಮಾಡಲಾಗಿದ್ದು, ಪ್ರವಾಸಿಗರ ಭೇಟಿಯನ್ನು ನಿಷೇಧಿಸಲಾಗಿದೆ. ಬೆಳಗಾವಿ ನಗರಕ್ಕೆ ಕುಡಿಯುವ ನೀರು ಪೂರೈಸುವ ರಾಕಸಕೊಪ್ಪ ಜಲಾಶಯದಲ್ಲಿ ಸದ್ಯ 0.04 ಟಿಎಂಸಿಯಷ್ಟು ನೀರು ಸಂಗ್ರಹವಾಗಿದ್ದು, ಪ್ರತಿದಿನ ನೀರಿನ ಮಟ್ಟ ಅರ್ಧ ಅಡಿಯಷ್ಟು ಏರಿಕೆಯಾಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ನೀರಿನ ಕೊರತೆಯಾಗುವುದಿಲ್ಲ; ಆದಾಗ್ಯೂ ಸಾರ್ವಜನಿಕರು ನೀರನ್ನು ಜಾಗರೂಕತೆಯಿಂದ ಬಳಸಬೇಕು ಎಂದು ಡಿಸಿ ಮನವಿ ಮಾಡಿದ್ದಾರೆ. ಇನ್ನು ಕಳೆದ ಎರಡು ದಿನಗಳಲ್ಲಿ ಜಿಲ್ಲೆಯಲ್ಲಿ ಭಾರಿ ಮಳೆಗೆ ಐದು ಮಣ್ಣಿನ ಗೋಡೆಯ ಮನೆಗಳು ಕುಸಿದು ಹಾನಿಗೊಳಗಾಗಿವೆ.

ಜಿಲ್ಲೆಯಲ್ಲಿ ಸದ್ಯ ಏಳು ಸೇತುವೆಗಳು ಜಲಾವೃತಗೊಂಡಿದ್ದು, ಪೊಲೀಸರ ಮೂಲಕ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ; ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಚಿಕ್ಕೋಡಿ ತಾಲೂಕಿನ ಗ್ರಾಮವೊಂದರಲ್ಲಿ ಎಮ್ಮೆಯೊಂದು ಮೃತಪಟ್ಟಿದ್ದು, ಸಂತ್ರಸ್ತರಿಗೆ ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ನಿಯಮಾವಳಿಗಳ ಪ್ರಕಾರ ಇಂದೇ ಪರಿಹಾರ ವಿತರಿಸಲು ಕಂದಾಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಡಿಸಿ ಕಚೇರಿಯಲ್ಲಿ ಕಂಟ್ರೋಲ್ ರೂಮ್ ಕಾರ್ಯಾಚರಣೆಯಲ್ಲಿದ್ದು, ಪೊಲೀಸ್-SDRF ತಂಡಗಳನ್ನು ಕಟ್ಟೆಚ್ಚರದಲ್ಲಿ ಇಡಲಾಗಿದೆ; ತೊಂದರೆಯಾದಲ್ಲಿ ಕೇವಲ 15 ನಿಮಿಷಗಳಲ್ಲಿ ಕಾಳಜಿ ಕೇಂದ್ರಗಳನ್ನು ಸಕ್ರಿಯಗೊಳಿಸುವ ಸಾಮರ್ಥ್ಯ ಹೊಂದಲಾಗಿದ್ದು, ‘ವಲ್ನರಬಲ್ ಹೌಸ್ ಮ್ಯಾಪಿಂಗ್’ ಮಾಡಲು ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಲಾಗಿದೆ. ಪಿಡಿಒ ಮತ್ತು ಬಿಲ್ ಕಲೆಕ್ಟರ್‌ಗಳ ಮೂಲಕ ಜನರಿಗೆ ತಕ್ಷಣ ಮುನ್ಸೂಚನೆ ನೀಡಿ ಸುರಕ್ಷಿತ ಸ್ಥಳಗಳಿಗೆ ಕಳುಹಿಸಲಾಗುವುದು ಹಾಗೂ ಸಾರ್ವಜನಿಕರು ನದಿಯಲ್ಲಿ ಸ್ನಾನ ಮಾಡುವುದು ಅಥವಾ ಮೋಟಾರ್ ರಿಪೇರಿಗೆ ಹೋಗಬಾರದು ಎಂದು ಎಚ್ಚರಿಸಲಾಗಿದೆ.

ಜಿಲ್ಲೆಯ ಪ್ರಮುಖ ಜಲಪಾತಗಳು ಮತ್ತು ಪ್ರವಾಸಿ ತಾಣಗಳಲ್ಲಿ ಸುರಕ್ಷಿತ ಹಾಗೂ ನಿಯಂತ್ರಿತ ಪ್ರವಾಸೋದ್ಯಮವನ್ನು ಉತ್ತೇಜಿಸಲು ಬೆಳಗಾವಿ ಜಿಲ್ಲಾಡಳಿತ ಗಂಭೀರ ಚಿಂತನೆ ನಡೆಸಿದೆ. ಅರಣ್ಯ ಅಧಿಕಾರಿಗಳು ಹಾಗೂ ಡಿಸಿಎಫ್ ಅವರೊಂದಿಗೆ ಚರ್ಚಿಸಿ, ‘ಗೈಡೆಡ್ ಟೂರ್’ ಅಥವಾ ದಿನಕ್ಕೆ ನಿಯಂತ್ರಿತ ಬ್ಯಾಚ್‌ಗಳಲ್ಲಿ ಪ್ರವಾಸಿಗರಿಗೆ ಅವಕಾಶ ಕಲ್ಪಿಸುವ ಕುರಿತು ಮುಂಬರುವ 10 ರಿಂದ 20 ದಿನಗಳ ಒಳಗಾಗಿ ಸೂಕ್ತ ‘ರೋಡ್ ಮ್ಯಾಪ್’ ಮತ್ತು ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗುವುದು ಎಂದು ಡಿಸಿ ತಿಳಿಸಿದ್ದಾರೆ. ಕಳೆದ ವರ್ಷ ಗೋಕಾಕ್ ಸೇರಿದಂತೆ ಪ್ರಮುಖ ಜಲಪಾತಗಳಲ್ಲಿ ಬ್ಯಾರಿಕೇಡ್ ದಾಟಿ ರೀಲ್ಸ್ ಮಾಡುವ ಹುಚ್ಚಾಟಗಳಿಂದ ಸುರಕ್ಷತೆಗೆ ಭಂಗ ಬಂದಿದ್ದನ್ನು ನೆನಪಿಸಿದ ಅವರು, ಸಾರ್ವಜನಿಕರು ನಿಯಮ ಪಾಲಿಸಿದರೆ ಮಾತ್ರ ಪ್ರವಾಸಿ ತಾಣ ಮುಂದುವರಿಸಲು ಸಾಧ್ಯ, ಇಲ್ಲದಿದ್ದರೆ ಮತ್ತೆ ಕಠಿಣ ನಿರ್ಬಂಧ ಹೇರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Tags:

error: Content is protected !!