Belagavi

ನಡುಗುವ ಚಳಿಯಲ್ಲಿ ಹಿರಿಯ ಜೀವಗಳ ಆಕ್ರಂದನ: ಬೆಳಗಾವಿ ಬೀದಿಯಲ್ಲೇ ವೃದ್ಧ ಸಹೋದರಿಯರ ನರಕಯಾತನೆ!

Share

ಬೆಳಗಾವಿಯ ಕ್ಯಾಂಪ್ ಏರಿಯಾದ ಮಹಿಳಾ ಪೊಲೀಸ್ ಠಾಣೆಯ ಎದುರಲ್ಲೇ ಇಬ್ಬರು ವೃದ್ಧ ಸಹೋದರಿಯರು ಬದುಕಿಗಾಗಿ ಹೋರಾಡುತ್ತಿದ್ದಾರೆ. ಮಳೆ ಹಾಗೂ ತೀವ್ರ ಚಳಿಗೆ ನಡುಗುತ್ತಾ, ಬೀದಿಯಲ್ಲೇ ದಿನದೂಡುತ್ತಿರುವ ಈ ಅಜ್ಜಿಯರ ಆಕ್ರಂದನ ಕೇಳುವವರೇ ಇಲ್ಲದಂತಾಗಿದೆ.

ಬೆಳಗಾವಿ ನಗರದ ಕ್ಯಾಂಪ್ ಪ್ರದೇಶದ ಮಹಿಳಾ ಪೊಲೀಸ್ ಠಾಣೆಯ ಸನಿಹದಲ್ಲೇ ಇಬ್ಬರು ವೃದ್ಧ ಸಹೋದರಿಯರು ಪ್ಲಾಸ್ಟಿಕ್ ತಾರ್ಪಾಲಿನ ತಾತ್ಕಾಲಿಕ ಶೆಡ್‌ನಲ್ಲಿ ಅತ್ಯಂತ ಕರಗುವ ಸ್ಥಿತಿಯಲ್ಲಿ ವಾಸಿಸುತ್ತಿದ್ದಾರೆ. ಸದ್ಯ ಸುರಿಯುತ್ತಿರುವ ಮಳೆಗೆ ಇವರ ಶೆಡ್‌ಗೆ ಆಸರೆಯಾಗಿರುವ ಮಣ್ಣಿನ ಗೋಡೆ ಸಂಪೂರ್ಣವಾಗಿ ನೆನೆದು ಹೋಗಿದ್ದು, ಯಾವುದೇ ಕ್ಷಣದಲ್ಲಾದರೂ ಕುಸಿದು ಬೀಳುವ ಅಪಾಯದಲ್ಲಿದೆ. ಮಳೆ ಮತ್ತು ಚಳಿಯ ಹೊಡೆತಕ್ಕೆ ಸಿಲುಕಿ ಈ ಹಿರಿಯ ಜೀವಗಳು ಅನುಭವಿಸುತ್ತಿರುವ ನರಕಯಾತನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದರೂ, ಇವರ ರಕ್ಷಣೆಗೆ ಯಾರೂ ಮುಂದಾಗಿಲ್ಲ.

ಈ ವೃದ್ಧೆಯರ ಪುನರ್ವಸತಿಗಾಗಿ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆಗೆ ಮುಂಚಿತವಾಗಿಯೇ ಮನವಿ ಸಲ್ಲಿಸಲಾಗಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳ ಈ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು, ಎನ್‌ಜಿಒಗಳು ಹಾಗೂ ಜನಪ್ರತಿನಿಧಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ಈ ಇಬ್ಬರು ಅಸಹಾಯಕ ಸಹೋದರಿಯರಿಗೆ ಸುರಕ್ಷಿತ ಆಶ್ರಯ ಮತ್ತು ಅಗತ್ಯ ಮಾನವೀಯ ನೆರವು ನೀಡಬೇಕಾಗಿದೆ.

Tags:

error: Content is protected !!