Belagavi

ಅಭಿವೃದ್ಧಿ ಕಾಣದ ಬಾಳೇಕುಂದ್ರಿ ಖುರ್ದ್: ಹತ್ತು ವರ್ಷಗಳಿಂದ ನರಕಸದೃಶ್ಯ ಬದುಕು ಸಾಗಿಸುತ್ತಿರುವ ಜನತೆ!

Share

ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದ ಕೂಗಳತೆಯ ದೂರದಲ್ಲಿರುವ ಬಾಲೇಕುಂದ್ರಿ ಖುರ್ದ್ ಗ್ರಾಮದಲ್ಲಿ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ. ಕಳೆದ ಹತ್ತು ವರ್ಷಗಳಿಂದ ಈ ಹಳ್ಳಿಯ ಸ್ಥಿತಿ ಅತ್ಯಂತ ದುಸ್ತರವಾಗಿದ್ದು, ಮೂಲಭೂತ ಸೌಕರ್ಯಗಳಿಗಾಗಿ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬೆಳಗಾವಿ ನಗರದಿಂದ ಕೇವಲ 10 ಕಿಲೋಮೀಟರ್ ದೂರದಲ್ಲಿರುವ ಹಾಗೂ ಸಾಂಬ್ರಾ ವಿಮಾನ ನಿಲ್ದಾಣದ ತೀರಾ ಸಮೀಪದಲ್ಲಿರುವ ಬಾಳೇಕುಂದ್ರಿ ಖುರ್ದ್ ಗ್ರಾಮವು ಕಳೆದ ಒಂದು ದಶಕದಿಂದ ಯಾವುದೇ ಪ್ರಗತಿ ಕಾಣದೆ ಸೊರಗುತ್ತಿದೆ. ಗ್ರಾಮದ ಪ್ರಮುಖ ಓಣಿಗಳಾದ ಫುಲ್‌ಬಾಗ್ ಗಲ್ಲಿ, ಕಸಾಯಿ ಗಲ್ಲಿ, ಟಿಪ್ಪು ಸುಲ್ತಾನ್ ಗಲ್ಲಿ ಹಾಗೂ ಮುಲ್ಲಾ ಗಲ್ಲಿ ಸೇರಿದಂತೆ ಹಲವು ಪ್ರದೇಶಗಳು ಸಂಪೂರ್ಣವಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಇಲ್ಲಿನ ಗ್ರಾಮ ಪಂಚಾಯತ್ ಆಡಳಿತದ ಬೇಜವಾಬ್ದಾರಿತನದಿಂದಾಗಿ ಇಡೀ ಗ್ರಾಮವು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದು, ನಿವಾಸಿಗಳು ಪ್ರತಿದಿನ ನರಕಯಾತನೆ ಅನುಭವಿಸುವಂತಾಗಿದೆ.

ಗ್ರಾಮದಲ್ಲಿ ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ, ಮನೆಗಳಿಂದ ಹೊರಬರುವ ಕೊಳಚೆ ನೀರು ಮುಕ್ತವಾಗಿ ರಸ್ತೆಗಳ ಮೇಲೆಯೇ ಹರಿಯುತ್ತಿದೆ ಎಂದು ಸ್ಥಳೀಯ ಮಹಿಳೆಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆಗಳು ಕೆಸರುಮಯವಾಗಿದ್ದು, ಇಡೀ ಪ್ರದೇಶದಲ್ಲಿ ದುರ್ನಾತ ಹರಡಿದೆ. ಇದರಿಂದಾಗಿ ಗ್ರಾಮದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ದಶಕ ಕಳೆದರೂ ಚರಂಡಿ ನೀರು ಸರಾಗವಾಗಿ ಹೋಗಲು ಸೂಕ್ತ ವ್ಯವಸ್ಥೆ ಕಲ್ಪಿಸದ ಪಂಚಾಯತ್ ಸದಸ್ಯರ ವಿರುದ್ಧ ಜನರು ಆಕ್ರೋಶದ ಸುರಿಮಳೆಗೈಯುತ್ತಿದ್ದಾರೆ.

ವಿಶೇಷವಾಗಿ, ಇಲ್ಲಿನ ಮುಸ್ಲಿಂ ಬಾಂಧವರು ಮಸೀದಿಗೆ ನಮಾಜ್ ಮಾಡಲು ಹೋಗುವ ರಸ್ತೆಯಲ್ಲೇ ಚರಂಡಿಯ ಕೊಳಕು ನೀರು ಹರಿಯುತ್ತಿರುವುದರಿಂದ ತೀವ್ರ ತೊಂದರೆಯಾಗಿದೆ. ಪವಿತ್ರ ಪ್ರಾರ್ಥನೆಗೆ ತೆರಳುವಾಗ ಮೈಮೇಲೆ ಕೊಳಚೆ ನೀರು ಸಿಡಿಯುತ್ತಿದ್ದು, ಧಾರ್ಮಿಕ ಕಾರ್ಯಗಳಿಗೆ ಧಕ್ಕೆಯಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ. ಸಂಬಂಧಪಟ್ಟ ಗ್ರಾಮ ಪಂಚಾಯತ್ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಕ್ಷಣವೇ ಎಚ್ಚೆತ್ತುಕೊಂಡು ಈ ಭಾಗದ ರಸ್ತೆ ಮತ್ತು ಚರಂಡಿ ಸಮಸ್ಯೆಯನ್ನು ಬಗೆಹರಿಸದಿದ್ದರೆ, ಮುಂಬರುವ ದಿನಗಳಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

Tags:

error: Content is protected !!