ಇತ್ತಿಚೆಗೆ ನಡೆದ ಅಗ್ನಿವೀರ ಆಯ್ಕೆಯಲ್ಲಿ ಧಾರವಾಡ ಜಿಲ್ಲೆಯಿಂದ ಪ್ರಥಮ ಮಹಿಳಾ ಅಗ್ನಿವೀರಗೆ ಆಯ್ಕೆಯಾಗುವ ಮೂಲಕ ಧಾರವಾಡದ ಜಿಲ್ಲೆ ಹಾಗೂ ತಡಕೋಡ್ ಗ್ರಾಮದ ಕೀರ್ತಿಯನ್ನು ಸ್ನೇಹಾ ಹೆಚ್ಚಿಸುವುದರ ಜತೆಗೆ ಇತರೆ ಮಹಿಳೆಯರಿಗೆ ಮಾದರಿಯಾಗಿದ್ದಾರೆ.


ಧಾರವಾಡ ತಾಲೂಕಿನ ತಡಕೋಡ ಗ್ರಾಮದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಭಾರತೀಯ ವಾಯುಪಡೆಗೆ (Indian Air Force) ‘ಅಗ್ನಿವೀರ್’ ಆಗಿ ಆಯ್ಕೆಯಾಗುವ ಮೂಲಕ ದೇಶಸೇವೆಯ ಮಹತ್ತರ ಜವಾಬ್ದಾರಿ ಹೊತ್ತ ಗ್ರಾಮೀಣದ ಪ್ರಥಮ ಮಹಿಳಾ ಸಾಧಕಿ ಖ್ಯಾತಿಯನ್ನು ಸ್ನೇಹಾ ಮಹಾರುದ್ರಯ್ಯಾ ಯರಗಂಬಳಿಮಠ ಪಡೆದುಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಸಮಾಜ ಸೇವಕರಾದ ಮಂಜುನಾಥ ಶಿವಪ್ಪ ಮಕ್ಕಳಗೇರಿ ಹಾಗೂ ತಡಕೋಡದ ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು.
ವಾಯುಪಡೆಗೆ ಆಯ್ಕೆಯಾಗಿ ಗ್ರಾಮದ ಕೀರ್ತಿ ಪತಾಕೆಯನ್ನು ಹಾರಿಸಿದ ಯುವತಿ ಸ್ನೇಹಾ ಅವರ ಸಾಧನೆಯನ್ನು ಸಮಾಜ ಸೇವಕ ಮಂಜುನಾಥ ಮಕ್ಕಳಗೇರಿ ಹಾಡಿಹೊಗಳಿದರು. ದೇಶದ ರಕ್ಷಣಾ ಪಡೆಯಲ್ಲಿ ಗ್ರಾಮೀಣ ಭಾಗದ ಹೆಣ್ಣುಮಗಳೊಬ್ಬಳು ಸೇವೆ ಸಲ್ಲಿಸಲು ಸಜ್ಜಾಗಿರುವುದು ಇಡೀ ಗ್ರಾಮಕ್ಕೆ ಹೆಮ್ಮೆಯ ವಿಷಯವಾಗಿದೆ. ಯುವ ಸಮುದಾಯ ಸ್ಪರ್ಧಾ ಮನೋಭಾವ ಬೆಳಸಿಕೊಳ್ಳುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ತಡಕೋಡ್ ಗ್ರಾಮದ ಸಮಸ್ತ ಹಿರಿಯರು, ಯುವಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
