Belagavi

ಖಂಜರ್ ಗಲ್ಲಿ ಸರ್ಕಾರಿ ಉರ್ದು ಶಾಲೆಯಲ್ಲಿ ಎಆರ್‌ಎಸ್ ಫೌಂಡೇಶನ್‌ನಿಂದ 600 ನೋಟ್‌ಬುಕ್ ವಿತರಣೆ:

Share

ಬಡ ಹಾಗೂ ಅರ್ಹ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಶಾಸಕ ಆಸಿಫ್ (ರಾಜು) ಸೇಠ್ ನೇತೃತ್ವದ ಎಆರ್‌ಎಸ್ ಫೌಂಡೇಶನ್ ನೆರವಾಗಿದೆ. ಖಂಜರ್ ಗಲ್ಲಿಯ ಸರ್ಕಾರಿ ಉರ್ದು ಶಾಲೆಯಲ್ಲಿ ಮಕ್ಕಳಿಗೆ ಉಚಿತ ನೋಟ್‌ಬುಕ್ ವಿತರಿಸುವ ಮೂಲಕ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಪ್ರೇರಣೆ ನೀಡಲಾಗಿದೆ.

ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಆಸೀಫ್ ಸೇಠ್ ಅವರ ಪರವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯುವ ನಾಯಕ ಅಮಾನ್ ಸೇಠ್ ಅವರು ವಿದ್ಯಾರ್ಥಿಗಳಿಗೆ 600 ನೋಟ್‌ಬುಕ್‌ಗಳನ್ನು ವಿತರಿಸಿ, ಮಕ್ಕಳೊಂದಿಗೆ ಆತ್ಮೀಯವಾಗಿ ಸಂವಾದ ನಡೆಸಿದರು. ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಓದಿ ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು. ಇದೇ ವೇಳೆ ಎಆರ್‌ಎಸ್ ಫೌಂಡೇಶನ್‌ನ ಮಹತ್ವಾಕಾಂಕ್ಷಿ ‘ಎಸ್ಎಸ್ಎಲ್‌ಸಿ ಸ್ಕಾಲರ್‌ಶಿಪ್ ಯೋಜನೆ’ಯ ಕುರಿತು ಮಾಹಿತಿ ನೀಡಿದ ಅವರು, ಮುಂಬರುವ ಪರೀಕ್ಷೆಯಲ್ಲಿ ಶೇ. 90 ಮತ್ತು ಶೇ. 95 ಕ್ಕಿಂತ ಹೆಚ್ಚು ಅಂಕ ಗಳಿಸುವ ಸಾಧಕ ವಿದ್ಯಾರ್ಥಿಗಳಿಗೆ ವಿಶೇಷ ವಿದ್ಯಾರ್ಥಿವೇತನ ನೀಡಿ ಗೌರವಿಸಲಾಗುವುದು ಎಂದು ಪ್ರಕಟಿಸಿದರು. ಕಳೆದ ಹಲವು ವರ್ಷಗಳಿಂದ ಈ ಸಂಸ್ಥೆಯು ಶೈಕ್ಷಣಿಕ ಕ್ಷೇತ್ರಕ್ಕೆ ನಿರಂತರ ಬೆಂಬಲ ನೀಡುತ್ತಾ ಬಂದಿದ್ದು, ಮುಂದೆಯೂ ಅರ್ಹ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಹೆಗಲಾಗಲಿದೆ ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರು, ಪೋಷಕರು, ಸ್ಥಳೀಯ ಮುಖಂಡರು ಹಾಗೂ ಫೌಂಡೇಶನ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

Tags:

error: Content is protected !!