Chikkodi

ಮಹಾರಾಷ್ಟ್ರದಲ್ಲಿ ಭಾರಿ ಮಳೆ: ಕೃಷ್ಣಾ, ದೂಧಗಂಗಾ ನದಿಗಳಿಗೆ 5 ಅಡಿಯಷ್ಟು ನೀರು ಏರಿಕೆ, ಚಿಕ್ಕೋಡಿ ತಾಲೂಕಿನಲ್ಲಿ ಮತ್ತೆ ಪ್ರವಾಹದ ಭೀತಿ

Share

ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಮುಂಗಾರು ಮಳೆ ಆರ್ಭಟಿಸುತ್ತಿದ್ದು, ಇದರ ನೇರ ಪರಿಣಾಮ ಚಿಕ್ಕೋಡಿ ತಾಲೂಕಿನ ನದಿಗಳ ಮೇಲೆ ಬೀರಿದೆ. ಮಹಾರಾಷ್ಟ್ರದ ಜಲಾನಯನ ಪ್ರದೇಶದಲ್ಲಿ ಹಾಗೂ ಚಿಕ್ಕೋಡಿ ತಾಲೂಕಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಚಿಕ್ಕೋಡಿ ತಾಲೂಕಿನ ಪ್ರಮುಖ ನದಿಗಳಾದ ಕೃಷ್ಣಾ, ದೂಧಗಂಗಾ ಮತ್ತು ವೇದಗಂಗಾ ನದಿಗಳಿಗೆ ಒಂದೇ ದಿನದಲ್ಲಿ ಬರೋಬ್ಬರಿ 5 ಅಡಿಯಷ್ಟು ನೀರು ಏರಿಕೆಯಾಗಿದೆ.

ನದಿಗಳ ನೀರಿನ ಮಟ್ಟ ದಿಢೀರ್ ಹೆಚ್ಚಳಗೊಂಡಿರುವುದರಿಂದ ನದಿ ತೀರದ ಜನರಲ್ಲಿ ಮತ್ತೆ ಪ್ರವಾಹದ ಭೀತಿ ಎದುರಾಗಿದೆ.ಕಳೆದ ಕೆಲವು ದಿನಗಳಿಂದ ಸಂಪೂರ್ಣ ಬತ್ತಿ ಹೋಗಿದ್ದ,ಕೃಷ್ಣಾ ನದಿಗೆ ಈಗ ಮಹಾರಾಷ್ಟ್ರದ ಮಳೆಯಿಂದಾಗಿ ದಿಢೀರ್ ಜೀವಕಳೆ ಬಂದಿದೆ. ಒಣಗಿದ್ದ ನದಿಯ ಒಡಲು ಈಗ ತುಂಬಿ ಹರಿಯುತ್ತಿದ್ದು, ನೋಡನೋಡುತ್ತಿದ್ದಂತೆ ನೀರಿನ ಪ್ರಮಾಣ ಅಪಾಯದ ಮಟ್ಟಕ್ಕೆ ತಲುಪುತ್ತಿದೆ. ಮುಂಗಾರು ಆರಂಭದಲ್ಲಿ ಮಳೆ ಕೈಕೊಟ್ಟಿದ್ದರಿಂದ ಕಂಗಾಲಾಗಿದ್ದ ಜನರಿಗೆ ಈಗ ನದಿಯಲ್ಲಿ ನೀರು ಕಂಡುಬಂದಿರುವುದು ಒಂದೆಡೆ ಸಮಾಧಾನ ತಂದಿದ್ದರೂ, ನೀರಿನ ಜಲವೇಗ ಮತ್ತು ಏರಿಕೆ ಪ್ರಮಾಣವನ್ನು ಕಂಡು ಪ್ರವಾಹದ ಆತಂಕ ಶುರುವಾಗಿದೆ.

ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಮಳೆ ಹೀಗೆಯೇ ಮುಂದುವರಿದರೆ, ನದಿಗಳು ಅಪಾಯದ ಮಟ್ಟ ಮೀರಿ ಹರಿಯಲಿವೆ. ನದಿಗೆ ಒಳಹರಿವು ಮತ್ತಷ್ಟು ಹೆಚ್ಚಾಗಲಿದ್ದು, ಚಿಕ್ಕೋಡಿ ತಾಲೂಕಿನ ತಗ್ಗು ಪ್ರದೇಶಗಳು ಹಾಗೂ ನದಿ ತೀರದ ಗ್ರಾಮಗಳಿಗೆ ನೀರು ನುಗ್ಗುವ ಸಾಧ್ಯತೆ ದಟ್ಟವಾಗಿದೆ. ಮಳೆ ಮುಂದುವರಿದರೆ ಯಾವುದೇ ಕ್ಷಣದಲ್ಲಾದರೂ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಡಿ‌‌.ಕೆ.ಉಪ್ಪಾರ ಇನ್ ನ್ಯೂಸ್ ಚಿಕ್ಕೋಡಿ

Tags:

error: Content is protected !!