- ರಾಜ್ಯದ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಆಹಾರದ ಬಿಲ್ ಪಾವತಿಯಾಗದ ಹಿನ್ನೆಲೆಯಲ್ಲಿ ಮೆಟ್ರಿಕ್ ಪೂರ್ವ ಮತ್ತು ನಂತರದ ಬಾಲಕ-ಬಾಲಕಿಯರ ಹಾಸ್ಟೆಲ್‌ಗಳ ನಿರ್ವಹಣೆ ಸಂಪೂರ್ಣ ಹದಗೆಟ್ಟಿದ್ದು, ನೂತನ ಮುಖ್ಯಮಂತ್ರಿಗಳು ತಕ್ಷಣವೇ ಮಧ್ಯಪ್ರವೇಶಿಸಬೇಕಾದ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ.
ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಬೆಳಗಾವಿ ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೆಟ್ರಿಕ್ ನಂತರದ ಮತ್ತು ಮೆಟ್ರಿಕ್ ಪೂರ್ವ ಆಶ್ರಯ ಶಾಲೆಗಳ ಬಾಲಕ-ಬಾಲಕಿಯರ ವಸತಿ ನಿಲಯಗಳ ಆಹಾರ ವೆಚ್ಚ ಪಾವತಿಸಲು ಕೋಟ್ಯಂತರ ರೂಪಾಯಿಗಳ ಅನುದಾನದ ಬಿಲ್ ಬಾಕಿಯಿದೆ. ಸರ್ಕಾರದ ವತಿಯಿಂದ ಅಧಿಕೃತವಾಗಿ ಟೆಂಡರ್ ಪಡೆದ “ಟಿಎಪಿಎಂಸಿಎಸ್” ಸಂಸ್ಥೆಯು ಕಳೆದ ಹಲವು ದಿನಗಳಿಂದ ನಿರಂತರವಾಗಿ ಆಹಾರ ಧಾನ್ಯಗಳನ್ನು ಪೂರೈಸುತ್ತಾ ಬಂದಿದ್ದರೂ, ಕಳೆದ 12 ರಿಂದ 14 ತಿಂಗಳಿನಿಂದ ಸರ್ಕಾರದಿಂದ

ನಿಯಮಿತವಾಗಿ ಅನುದಾನ ಪಾವತಿಯಾಗಿಲ್ಲ. ಇದರಿಂದಾಗಿ ವಸತಿ ನಿಲಯಗಳ ವಿದ್ಯಾರ್ಥಿಗಳಿಗೆ ದೈನಂದಿನ ಆಹಾರ ಪೂರೈಕೆಯಲ್ಲಿ ಭಾರಿ ತೊಂದರೆಯುಂಟಾಗುತ್ತಿದ್ದು, ಇತ್ತ ವಾರ್ಡನ್‌ಗಳು ಹಾಸ್ಟೆಲ್‌ಗಳನ್ನು ದೈನಂದಿನವಾಗಿ ನಿರ್ವಹಿಸಲು ಹಾಗೂ ವಿದ್ಯಾರ್ಥಿಗಳನ್ನು ನಿಭಾಯಿಸಲು ತೀವ್ರ ತೊಂದರೆಗೆ


ಸಿಲುಕಿದ್ದಾರೆ. ಆಹಾರ ಧಾನ್ಯದ ಅನುದಾನವಷ್ಟೇ ಅಲ್ಲದೆ, ವಸತಿ ನಿಲಯಗಳ ಮೂಲಸೌಕರ್ಯಗಳ ಬಿಲ್ಲುಗಳು ಕೂಡ

ಪಾವತಿಯಾಗಿಲ್ಲ ಎಂಬ ಗಂಭೀರ ಆರೋಪಗಳು ಟೆಂಡರುದಾರರಿಂದ ಕೇಳಿ ಬರುತ್ತಿವೆ.

ಈ ಭೀಕರ ಸಮಸ್ಯೆಯ ಕುರಿತು ಕಳೆದ ಮೂರು ತಿಂಗಳಿನಿಂದ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಿಗೆ ಗುತ್ತಿಗೆದಾರರು ಹಾಗೂ ವಾರ್ಡನ್‌ಗಳು ಮನವಿ ಮಾಡಿದ್ದಾರೆ. ಜಂಟಿ ನಿರ್ದೇಶಕರು ಮೇಲಾಧಿಕಾರಿಗಳ ಗಮನಕ್ಕೆ ತರುವಂತೆ ಜಾರಿಕೊಂಡರೆ, ಇತ್ತ ಇಲಾಖೆಯ ಆಯುಕ್ತರ ಗಮನಕ್ಕೆ ತಂದರೂ ಯಾವುದೇ ಗಂಭೀರ ಕ್ರಮಗಳು ಜರುಗಿಲ್ಲ. ಪರಿಸ್ಥಿತಿಯ ಗಂಭೀರತೆಯನ್ನು ಅರಿತು ವಾರ್ಡನ್‌ಗಳು ಬೆಂಗಳೂರಿಗೆ ತೆರಳಿ ವರಿಷ್ಠರ ಗಮನಕ್ಕೆ ತಂದರೂ ಫಲ ಸಿಕ್ಕಿಲ್ಲ. ರಾಜ್ಯದ ಪ್ರತಿಯೊಂದು ಜಿಲ್ಲೆಗಳಲ್ಲೂ ಇದೇ ದುಸ್ಥಿತಿ ಮುಂದುವರಿದಿದ್ದು, ರಾಜ್ಯಾದ್ಯಂತ ವ್ಯಾಪಕ ಚರ್ಚೆ ಮತ್ತು ಆಕ್ರೋಶ ವ್ಯಕ್ತವಾಗುತ್ತಿದೆ. ಹೀಗಾಗಿ ರಾಜ್ಯದ ಮುಖ್ಯಮಂತ್ರಿಗಳು ಕೂಡಲೇ ಪರಿಹಾರವನ್ನು ಕಂಡುಕೊಂಡು, ಗುತ್ತಿಗೆದಾರರಿಗಾಗುತ್ತಿರುವ ಆರ್ಥಿಕ ಸಂಕಷ್ಟವನ್ನು ನೀಗಿಸುವುದರೊಂದಿಗೆ ವಸತಿ ನಿಲಯದ ಮಕ್ಕಳಿಗೆ ತೊಂದರೆಯಾಗದಂತೆ ಕ್ರಮವಹಿಸಬೇಕಿದೆ.
