ಬೆಳಗಾವಿ-ಚೋರ್ಲಾ ಮಾರ್ಗದ ಪ್ರಯಾಣಿಕರ ದಶಕಗಳ ಸಮಸ್ಯೆಗೆ ಕೊನೆಗೂ ಮುಕ್ತಿ ಸಿಗುವ ಲಕ್ಷಣಗಳು ಕಾಣುತ್ತಿವೆ. ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಖಾನಾಪೂರ ತಾಲೂಕಾ ಅಧ್ಯಕ್ಷ ಸೂರ್ಯಕಾಂತ ಕೆ. ಕುಲಕರ್ಣಿ ಅವರ ನಿರಂತರ ಹೋರಾಟಕ್ಕೆ ಸ್ಪಂದಿಸಿರುವ NWKSRTC ಅಧಿಕಾರಿಗಳು, ಮುಂದಿನ ಹತ್ತು ದಿನಗಳಲ್ಲಿ ಹೊಸ ಬಸ್ ಸೇವೆ ಆರಂಭಿಸುವುದಾಗಿ ಭರವಸೆ ನೀಡಿದ್ದಾರೆ. ಜೊತೆಗೆ ಗುಂಜಿ ಗ್ರಾಮದಲ್ಲೂ ಎಕ್ಸ್ಪ್ರೆಸ್ ಬಸ್ಗೆ ಅಧಿಕೃತ ನಿಲ್ದಾಣ ನೀಡುವಂತೆ ಪ್ರತ್ಯೇಕ ಮನವಿ ಸಲ್ಲಿಸಲಾಗಿದೆ.

ಬೆಳಗಾವಿ ಬಸ್ ನಿಲ್ದಾಣದಿಂದ ಚೋರ್ಲಾ ಮಾರ್ಗಕ್ಕೆ ಹೊಸ ಬಸ್ ಸೇವೆ ಆರಂಭಿಸಬೇಕು ಹಾಗೂ ಎಲ್ಲಾ ಬಸ್ಗಳಿಗೆ ಚೋರ್ಲಾದಲ್ಲಿ ನಿಯಮಿತ ನಿಲುಗಡೆ ಕಲ್ಪಿಸಬೇಕು ಎಂದು ಒತ್ತಾಯಿಸಿ ಸೂರ್ಯಕಾಂತ ಕುಲಕರ್ಣಿ ಅವರು 2025ರ ಜನವರಿಯಿಂದ ನಿರಂತರವಾಗಿ ನಡೆಸುತ್ತಿದ್ದ ಹೋರಾಟಕ್ಕೆ ಈಗ ದೊಡ್ಡ ಜಯ ಸಿಕ್ಕಿದೆ. ಜಿಲ್ಲಾ ಮಟ್ಟದ ಸಭೆಯಲ್ಲಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಕರ್ನಾಟಕ ರಾಜ್ಯ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಎಸ್. ಆರ್. ಪಾಟೀಲ ಹಾಗೂ ಜಿಲ್ಲಾ ಅಧ್ಯಕ್ಷ ವಿನಯ ನಾವಲಗಟ್ಟಿ ಅವರು ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳುವಂತೆ ಸಾರಿಗೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ. ಸಭೆಯಲ್ಲಿದ್ದ NWKSRTC ಅಧಿಕಾರಿಗಳು ಮುಂದಿನ ಹತ್ತು ದಿನಗಳಲ್ಲಿ ಹೊಸ ಬಸ್ ಸೇವೆಯನ್ನು ಆರಂಭಿಸುವುದಾಗಿ ಅಧಿಕೃತವಾಗಿ ಭರವಸೆ ನೀಡಿದ್ದು, ಇದರಿಂದ ಶಾಲಾ ವಿದ್ಯಾರ್ಥಿಗಳು, ಉದ್ಯೋಗಸ್ಥರು ಹಾಗೂ ಸಾರ್ವಜನಿಕರಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿದೆ. ಇದೇ ಸಂದರ್ಭದಲ್ಲಿ, ಸೂರ್ಯಕಾಂತ ಕುಲಕರ್ಣಿ ಅವರು ಗುಂಜಿ ಗ್ರಾಮದ ನಾಗರಿಕರ ದೀರ್ಘಕಾಲದ ಬೇಡಿಕೆಯೊಂದನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಸುಮಾರು ಎಂಟು ಸಾವಿರ ಜನಸಂಖ್ಯೆ ಹೊಂದಿರುವ, ಉಪತಹಸೀಲ್ದಾರ್ ಹಾಗೂ ನೋಂದಣಿ ಕಚೇರಿಗಳನ್ನು ಒಳಗೊಂಡಿರುವ ಪ್ರಮುಖ ಕೇಂದ್ರವಾದ ಗುಂಜಿ ಗ್ರಾಮದ ಮೂಲಕ ಹಾದುಹೋಗುವ ಬೆಳಗಾವಿ–ರಾಮನಗರ (ಮಾರ್ಗ ಸಂಖ್ಯೆ 46) ಎಕ್ಸ್ಪ್ರೆಸ್ ಬಸ್ಗೆ ಅಲ್ಲಿ ಅಧಿಕೃತ ನಿಲುಗಡೆ ನೀಡಬೇಕು ಎಂದು ಪ್ರತ್ಯೇಕ ಮನವಿ ಸಲ್ಲಿಸಲಾಗಿದೆ. ಸೂಕ್ತ ಬಸ್ ನಿಲ್ದಾಣದ ವ್ಯವಸ್ಥೆ ಇಲ್ಲದೆ ಪ್ರತಿದಿನ ತೊಂದರೆ ಅನುಭವಿಸುತ್ತಿರುವ ಸಾರ್ವಜನಿಕರ ಹಿತದೃಷ್ಟಿಯಿಂದ ಈ ಬೇಡಿಕೆಯನ್ನು ಮಂಡಿಸಲಾಗಿದ್ದು, ರಾಜ್ಯ ಉಪಾಧ್ಯಕ್ಷ ಎಸ್. ಆರ್. ಪಾಟೀಲ ಅವರು ಶೀಘ್ರದಲ್ಲೇ ಈ ಕುರಿತು ಸಕಾರಾತ್ಮಕ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದ್ದಾರೆ.
