ಬೆಳಗಾವಿ ನಗರದ ಫ್ರೂಟ್ ಮಾರ್ಕೆಟ್ ಸಮೀಪವಿರುವ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳು ದಿನನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಇತ್ತೀಚೆಗೆ ಸಂಬಂಧಪಟ್ಟ ಇಲಾಖೆಯು ಪೈಪ್‌ಲೈನ್ ಅಳವಡಿಸಲು ಈ ರಸ್ತೆಯನ್ನು ಅಗೆದಿತ್ತು, ಆದರೆ ಕಾಮಗಾರಿ ಮುಗಿದ ನಂತರ ರಸ್ತೆಯನ್ನು ಯಥಾಸ್ಥಿತಿಗೆ ತರಲು ಸಂಪೂರ್ಣವಾಗಿ ಮರೆತುಹೋಗಿದೆ.


ಇಡೀ ರಸ್ತೆಯುದ್ದಕ್ಕೂ ಬೃಹತ್ ಗಾತ್ರದ ಹೊಂಡಗಳು . ಮಳೆಗಾಲ ಆರಂಭವಾಗಿರುವುದರಿಂದ ಈ ಗುಂಡಿಗಳಲ್ಲಿ ನೀರು ತುಂಬಿ ಕೆರೆಯಂತಾದ ರಸ್ತೆ. ರಸ್ತೆ ಎಲ್ಲಿದೆ, ಗುಂಡಿ ಎಲ್ಲಿದೆ ಎಂದು ತಿಳಿಯದೇ ಪೇಚಿಗೆ ಸಿಲುಕಿ ಅಪಘಾತಕ್ಕಿಡಾಗುತ್ತಿರುವ ವಾಹನ ಸವಾರರು. ಹೌದು ಈ ದೃಶ್ಯಗಳು ಬೆಳಗಾವಿ ನಗರದ ಫ್ರೂಟ್ ಮಾರ್ಕೆಟ್ ಸಮೀಪವಿರುವ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯದ್ದು. ಇಲ್ಲಿ ಸಂಚರಿಸುವ ಹಲವಾರು ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದರೆ, ಪಾದಚಾರಿಗಳು ನಡೆದುಕೊಂಡು ಹೋಗಲು ಜಾಗವಿಲ್ಲದೆ ಪರದಾಡುತ್ತಿದ್ದಾರೆ. ಲಾರಿ ಮತ್ತು ಇತರ ಭಾರಿ ವಾಹನಗಳ ಸಂಚಾರವೂ ಹೆಚ್ಚಾಗಿರುವುದರಿಂದ ಈ ಭಾಗದಲ್ಲಿ ಸಂಚಾರ ದಟ್ಟಣೆ ಹಾಗೂ ಅಪಘಾತಗಳ ಭೀತಿ ಎದುರಾಗಿದೆ. ಪೈಪ್‌ಲೈನ್ ಹಾಕಲು ರಸ್ತೆ ಅಗೆದ ಇಲಾಖೆ, ಕೆಲಸ ಮುಗಿದ ಮೇಲೆ ಅದನ್ನು ರಿಪೇರಿ ಮಾಡುವ ಜವಾಬ್ದಾರಿಯನ್ನು ಮರೆತಿದೆ. ಅಧಿಕಾರಿಗಳ ಈ ಬೇಜವಾಬ್ದಾರಿತನದಿಂದಾಗಿ ನಾವು ನಿತ್ಯ ಪ್ರಾಣ ಕೈಯಲ್ಲಿಡಿದು ಸಂಚರಿಸಬೇಕಾಗಿದೆ,” ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳಗಾವಿಯ ಪ್ರವೇಶ ದ್ವಾರದಿಂದ ಸಂಕಮ್ ಹೋಟೆಲ್ ಕಾರ್ನರ್ ವರೆಗಿನ ರಸ್ತೆಯು ಅತ್ಯಂತ ಕಳಪೆ ಸ್ಥಿತಿಯಲ್ಲಿದ್ದು, ಮೊಣಕಾಲುದ್ದದ ದೊಡ್ಡ ದೊಡ್ಡ ಗುಂಡಿಗಳಿಂದಾಗಿ ವಾಹನ ಸವಾರರು ಮತ್ತು ಸಾರ್ವಜನಿಕರು ಸಂಚರಿಸಲು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಸ್ಥಳೀಯ ಸವಾರರೊಬ್ಬರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಾನಗರ ಪಾಲಿಕೆ ಹಾಗೂ ಲೋಕೋಪಯೋಗಿ ಇಲಾಖೆಗಳ ನಿರ್ಲಕ್ಷ್ಯದಿಂದಾಗಿ ಇಲ್ಲಿ ನಿರಂತರವಾಗಿ ವಾಹನಗಳು ಸಿಲುಕಿಕೊಳ್ಳುತ್ತಿದ್ದು, ಜೀವಹಾನಿಯಾಗುವಂತಹ ಅಪಘಾತಗಳು ಸಂಭವಿಸುವ 100% ಸಾಧ್ಯತೆ ಇದೆ. ಮುಂಬರುವ ದಿನಗಳಲ್ಲಿ ಮಳೆ ಇನ್ನು ಹೆಚ್ಚಾಗುವುದರಿಂದ, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಈ ರಸ್ತೆಯನ್ನು ಆದಷ್ಟು ಬೇಗ ದುರಸ್ತಿ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಬೆಳಗಾವಿಯ ಪ್ರಮುಖ ಪ್ರವೇಶ ರಸ್ತೆಯು ಅತ್ಯಂತ ಕಳಪೆ ಸ್ಥಿತಿಗೆ ತಲುಪಿದ್ದು, ವಾಹನ ಸವಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ರಸ್ತೆಯ ಗುಂಡಿಗಳಿಗೆ ಬಿದ್ದರೆ ಮತ್ತೆ ಮೇಲೇಳಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ, ಸಾಮಾನ್ಯ ಮಳೆಗೆ ಈ ರಸ್ತೆ ಹೀಗಾದರೆ ಮುಂದಿನ ದಿನಗಳಲ್ಲಿ ವಾಹನ ಸವಾರರ ಗತಿ ಏನು?” ಎಂದು ಅವರು ಪ್ರಶ್ನಿಸಿದ್ದಾರೆ. ಈ ಮಾರ್ಗವಾಗಿ ದಿನನಿತ್ಯ ಹಲವಾರು ಲಕ್ಸುರಿ ಬಸ್‌ಗಳು ಹಾಗೂ ಇತರೆ ವಾಹನಗಳು ಸಂಚರಿಸುತ್ತಿದ್ದು, ದ್ವಿಚಕ್ರ ವಾಹನ ಮತ್ತು ಆಟೋ ಚಾಲಕರಿಗೆ ಸಂಚಾರವೇ ದುಸ್ತರವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಮಳೆಗಾಲದಲ್ಲಿ ಸಂಭವಿಸಬಹುದಾದ ದೊಡ್ಡ ಅನಾಹುತಗಳನ್ನು ತಪ್ಪಿಸಲು ಆದಷ್ಟು ಬೇಗ ಈ ರಸ್ತೆಯನ್ನು ದುರಸ್ತಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಬೆಳಗಾವಿಯ ವಂಟಮುರಿ ಕ್ರಾಸ್‌ನಿಂದ ಗಾಂಧಿನಗರ ಹಾಗೂ ಫ್ರೂಟ್ ಮಾರ್ಕೆಟ್‌ವರೆಗಿನ ರಸ್ತೆಯು ಸಂಪೂರ್ಣವಾಗಿ ಹಾಳಾಗಿದ್ದು, ಈ ಕುರಿತು ಸಾರ್ವಜನಿಕರೊಬ್ಬರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೊಸದಾಗಿ ನಿರ್ಮಿಸಲಾದ ಈ ರಸ್ತೆಯು ಈಗ ಕಳಪೆ ಸ್ಥಿತಿಗೆ ತಲುಪಿದ್ದು, ನೂರಾರು ಗುಂಡಿಗಳಿಂದಾಗಿ ಸಂಚಾರಕ್ಕೆ ಯೋಗ್ಯವಿಲ್ಲದಂತಾಗಿದೆ; ಇದರಿಂದ ವಾಹನಗಳು ನಿರಂತರವಾಗಿ ಹಾನಿಗೊಳಗಾಗುತ್ತಿವೆ ಮತ್ತು ದ್ವಿಚಕ್ರ ಹಾಗೂ ಕಾರು ಸವಾರರ ಮೇಲೆ ಕೆಸರು ನೀರು ಸಿಡಿಯುತ್ತಿರುವುದರಿಂದ ತೀವ್ರ ತೊಂದರೆ ಅನುಭವಿಸುವಂತಾಗಿದೆ. ಮಳೆಗಾಲದಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿರುವುದರಿಂದ, ಅಧಿಕಾರಿಗಳು ಕೂಡಲೇ ಗಮನಹರಿಸಿ ರಸ್ತೆಯನ್ನು ಆದಷ್ಟು ಬೇಗ ಮರುನಿರ್ಮಾಣ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಮಳೆಗಾಲದ ಈ ಸಂದರ್ಭದಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಮುನ್ನ, ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳು ತಕ್ಷಣವೇ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕನಿಷ್ಠ ಪಕ್ಷ ತಾತ್ಕಾಲಿಕವಾಗಿಯಾದರೂ ರಸ್ತೆ ದುರಸ್ತಿಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಸಾರ್ವಜನಿಕರು ಹಾಗೂ ವಾಹನ ಸವಾರರು ಒತ್ತಾಯಿಸುತ್ತಿದ್ದಾರೆ.
