Chikkodi

ರಸ್ತೆಯೋ ಅಥವಾ ಕೆರೆಯೋ? ವಿಜಯನಗರ-ಜಾಗನೂರ ರಸ್ತೆ ಗುಂಡಿಯಲ್ಲಿ ನಿಂತು ಯುವಕನ ಮನವಿ

Share

ತಾಲೂಕಿನ ವಿಜಯನಗರ ಹಾಗೂ ಜಾಗನೂರನಿಂದ ಕಬ್ಬೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು, ವಾಹನ ಸವಾರರು ಮತ್ತು ಸಾರ್ವಜನಿಕರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ರಸ್ತೆಯುದ್ದಕ್ಕೂ ಬಿದ್ದಿರುವ ಬೃಹತ್ ತಗ್ಗು-ಗುಂಡಿಗಳಲ್ಲಿ ಮಳೆ ನೀರು ಸಂಗ್ರಹಗೊಂಡು ಕೆರೆಯಂತಾಗಿದ್ದು, ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.

ರಸ್ತೆಯ ಈ ದುಸ್ಥಿತಿಯಿಂದ ಬೇಸತ್ತ ಲಕ್ಷ್ಮಣ ಯಡ್ರಾಂವಿ ಎಂಬ ಯುವಕ, ಅದೇ ರಸ್ತೆಯ ನೀರಿನ ಗುಂಡಿಯಲ್ಲೇ ನಿಂತು ವಿಡಿಯೋ ಮಾಡುವ ಮೂಲಕ ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಅವರಿಗೆ ನಯವಾಗಿಯೇ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯನಗರ-ಜಾಗನೂರನಿಂದ ಕಬ್ಬೂರ ಗ್ರಾಮಕ್ಕೆ ಸೇರುವ ಈ ರಸ್ತೆ ಪ್ರಮುಖ ಸಂಪರ್ಕ ರಸ್ತೆಯಾಗಿದೆ. ಆದರೆ, ಇತ್ತೀಚೆಗೆ ಬಿದ್ದ ಮಳೆಗೆ ರಸ್ತೆಯ ಗುಂಡಿಗಳಲ್ಲಿ ನೀರು ತುಂಬಿರುವುದರಿಂದ ಸಂಚಾರ ದುಸ್ತರವಾಗಿದೆ. ಬೈಕ್ ಸವಾರರು, ಶಾಲಾ ಮಕ್ಕಳು ಹಾಗೂ ರೈತರು ಈ ರಸ್ತೆಯಲ್ಲಿ ಓಡಾಡಲು ಜೀವ ಕೈಯಲ್ಲಿಡಿದು ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಗೌರವಾನ್ವಿತ ಶಾಸಕರೇ, ಒಮ್ಮೆ ಈ ರಸ್ತೆಯ ಕಡೆ ಗಮನಹರಿಸಿ. ಇಲ್ಲಿ ದಿನಾಲೂ ಜನ ಪಡುತ್ತಿರುವ ಪಾಡನ್ನು ನೀವೇ ಬಂದು ನೋಡಿ ಎಂದು ಯುವಕ ಲಕ್ಷ್ಮಣ ಯಡ್ರಾಂವಿ ಗುಂಡಿಯ ನೀರಿನಲ್ಲಿ ನಿಂತುಕೊಂಡೇ ಶಾಸಕರಿಗೆ ಮನವಿ ಮಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಸಾರ್ವಜನಿಕರ ಬೆಂಬಲ ವ್ಯಕ್ತವಾಗುತ್ತಿದೆ.

ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು, ತಕ್ಷಣವೇ ಈ ರಸ್ತೆಯ ಗುಂಡಿಗಳನ್ನು ಮುಚ್ಚಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತಾರೆ ಕಾದು ನೋಡಬೇಕು..

ಡಿ.ಕೆ.ಉಪ್ಪಾರ ಇನ್ ನ್ಯೂಸ್ ಚಿಕ್ಕೋಡಿ.

Tags:

error: Content is protected !!