ಪ್ರಭಾವಿಗಳ ಅಕ್ರಮ ಒತ್ತುವರಿಗಳಿಗೆ ಕಣ್ಣುಮುಚ್ಚಿ ಕುಳಿತಿರುವ ಅಧಿಕಾರಿಗಳು, ಬೀದಿಬದಿಯ ಸಣ್ಣಪುಟ್ಟ ವ್ಯಾಪಾರಿಗಳನ್ನು ಮಾತ್ರ ಗುರಿಯಾಗಿಸಿಕೊಂಡು ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅನಗೋಳದಲ್ಲಿ ಇತ್ತೀಚೆಗೆ ನಡೆದ ಪಾಲಿಕೆಯ ಏಕಪಕ್ಷೀಯ ಕಾರ್ಯಾಚರಣೆಯನ್ನು ಖಂಡಿಸಿ, ಆಕ್ರೋಶಿತ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಇಂದು ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿ, ಧಮ್ಮಿದ್ರೆ ‘ಆ’ ಅಧಿಕಾರಿ ಖಾವುಕಟ್ಟಾದ ಒತ್ತುವರಿ ತೆರವುಗೊಳಿಸಲಿ”: ಎಂದು ಸವಾಲು ಹಾಕಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯ ಅನಗೋಳದಲ್ಲಿ ಇತ್ತೀಚೆಗೆ ನಡೆದ ಬೀದಿಬದಿ ವ್ಯಾಪಾರಿಗಳ ಒತ್ತುವರಿ ತೆರವು ಕಾರ್ಯಾಚರಣೆ ತೀವ್ರ ಸ್ವರೂಪದ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಎಸ್‌ಸಿ-ಎಸ್‌ಟಿ ಹಾಗೂ ಹಿಂದುಳಿದ ವರ್ಗದ ಸಣ್ಣಪುಟ್ಟ ಬಡ ವ್ಯಾಪಾರಿಗಳ ಹೊಟ್ಟೆಪಾಡಿನ ಅಂಗಡಿಗಳನ್ನು ಮಾತ್ರ ಗುರಿಯಾಗಿಸಿಕೊಂಡು ಧ್ವಂಸಗೊಳಿಸಿರುವ ಅಧಿಕಾರಿಗಳ ಕ್ರಮಕ್ಕೆ ವ್ಯಾಪಾರಿಗಳ ನಿಯೋಗವು ತೀವ್ರ ಖಂಡನೆ ವ್ಯಕ್ತಪಡಿಸಿದೆ.
ಮನವಿ ಸಲ್ಲಿಸುವ ವೇಳೆ ಅಧಿಕಾರಿಗಳ ವಿರುದ್ಧ ಗುಡುಗಿದ ಮುಖಂಡ ಸುಜೀತ್ ಮುಳಗುಂದ, “ಕಳೆದ 2022 ರಿಂದಲೂ ನಗರದ ಖಾವುಕಟ್ಟೆಯ ಬಳಿ ಫುಟ್‌ಪಾತ್‌ಗಳನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು, ಟೇಬಲ್-ಕುರ್ಚಿಗಳನ್ನು ಹಾಕಿ ರಾಜಾರೋಷವಾಗಿ ವ್ಯಾಪಾರ ಮಾಡಲಾಗುತ್ತಿದೆ. ಬಡವರ ಅಂಗಡಿಗಳನ್ನು ತೆರವುಗೊಳಿಸುವ ಆ ಅಧಿಕಾರಿಗಳಿಗೆ ಧಮ್ಮಿದ್ದರೆ, ಧೈರ್ಯವಿದ್ದರೆ ಮೊದಲು ಖಾವುಕಟ್ಟಾದ ಒತ್ತುವರಿಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿ ‘ಫುಟ್‌ಪಾತ್ ಕ್ಲಿಯರೆನ್ಸ್’ ಮಾಡಲಿ” ಎಂದು ನೇರ ಸವಾಲು ಹಾಕಿದರು.
ಇನ್ನು ಅಡ್ವೋಕೇಟ್ ಎನ್.ಆರ್.ಲಾಥೂರ್ ಅವರು ಮಹಾನಗರ ಪಾಲಿಕೆ ಅನುಮತಿ ಪಡೆದೇ, ಪ್ರತಿದಿನ ಭೂಬಾಡಿಗೆ ನೀಡಿ ವ್ಯಾಪಾರ ನಡೆಸುವವರಿಗೆ ನೋಟಿಸ್ ನೀಡದೇ ಕಾನೂನು ಉಲ್ಲಂಘಿಸಿ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಅವರಿಗಾದ ನಷ್ಟಕ್ಕೆ ಪರಿಹಾರ ನೀಡಬೇಕು ಮತ್ತು ತೆರವು ಕಾರ್ಯಾಚರಣೆ ನಡೆಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಈ ವೇಳೆ ಅನಗೋಳ ಬೀದಿಬದಿ ವ್ಯಾಪಾರಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ಧರು.
