ರಾಜ್ಯದ ಜಲಾಶಯಗಳು ಡೆಡ್ ಸ್ಟೋರೇಜ್ ಮಟ್ಟ ತಲುಪಿದ್ದು, ಮನುಷ್ಯರ ಜೀವ ಉಳಿಸಲು ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ ತಿಳಿಸಿದ್ದಾರೆ.

ಇಂದು ಬೆಳಗಾವಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಬೆಳಗಾವಿ ವಿಭಾಗದ ಏಳು ಜಿಲ್ಲೆಗಳಲ್ಲಿ ಜೂನ್ ತಿಂಗಳಿನಲ್ಲಿ ನಿರೀಕ್ಷಿತ ಮಳೆಯಾಗದೆ ಭೀಕರ ಬರ ಪರಿಸ್ಥಿತಿ ಎದುರಾಗಿದೆ. ಇತಿಹಾಸದಲ್ಲೇ ಎಂದೂ ಕಾಣದ ಇಂತಹ ಕನಿಷ್ಠ ಮಟ್ಟಕ್ಕೆ ಜಲಾಶಯಗಳ ನೀರು ಕುಸಿದಿದ್ದು, ಜನರಿಗೆ ಕುಡಿಯುವ ನೀರು ಹಾಗೂ ಉದ್ಯೋಗ ಒದಗಿಸಲು ಸರ್ಕಾರ ಈಗಾಗಲೇ ‘ಪ್ಲ್ಯಾನ್ ಆಫ್ ಆ್ಯಕ್ಷನ್’ ರೂಪಿಸಿದೆ. ತುರ್ತು ಅಗತ್ಯಗಳಿಗಾಗಿ ಪ್ರತಿ ಜಿಲ್ಲಾಧಿಕಾರಿಗಳ ಪಿಡಿ (PD) ಖಾತೆಯಲ್ಲಿ ತಲಾ 5 ಕೋಟಿ ರೂಪಾಯಿ ಹಣವನ್ನು ಮೀಸಲಿಡಲಾಗಿದೆ. ಎನ್‌ಡಿಆರ್‌ಎಫ್ (NDRF) ನಿಯಮಗಳ ಬದಲಾವಣೆಗೆ ಕೇಂದ್ರಕ್ಕೆ ಮನವಿ ಮಾಡಿದ್ದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ನಾವು ನೀಡುವ ಹಾನಿಯ ಮೊತ್ತದಲ್ಲಿ ಕೇವಲ ಶೇ 10ರಷ್ಟು ಮಾತ್ರ ಕೇಂದ್ರದಿಂದ ಪರಿಹಾರ ಬರುತ್ತಿದೆ. ಸದ್ಯಕ್ಕೆ ಆಕಾಶದಲ್ಲಿ ಮೋಡಗಳೇ ಇಲ್ಲದ ಕಾರಣ ಮೋಡ ಬಿತ್ತನೆ ಮಾಡುವ ಚಿಂತನೆ ಸರ್ಕಾರದ ಮುಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ರಾಜ್ಯದ ಜಲಾಶಯಗಳು ಈಗಾಗಲೇ ಡೆಡ್ ಸ್ಟೋರೇಜ್ ಮಟ್ಟ ತಲುಪಿರುವುದರಿಂದ, ಯಾವುದೇ ಕಾರಣಕ್ಕೂ ಲಭ್ಯವಿರುವ ನೀರನ್ನು ಕುಡಿಯುವ ಉದ್ದೇಶವನ್ನು ಹೊರತುಪಡಿಸಿ ಬೇರೆ ಯಾವುದೇ ಕೆಲಸಗಳಿಗೆ ಬಿಡುಗಡೆ ಮಾಡದಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ಇನ್ನು ಒಣಗುತ್ತಿರುವ ಬೋರ್‌ವೆಲ್‌ಗಳ ಸಮಸ್ಯೆಯನ್ನು ನೀಗಿಸಲು ಹೈಡ್ರೋ ಫ್ರಾಕ್ಚರ್, ರೀ-ಬೋರ್ ಅಥವಾ ಹೊಸ ಬೋರ್‌ವೆಲ್ ಕೊರೆಯಲು ಕ್ರಮ ವಹಿಸಲಾಗುತ್ತಿದೆ. ಅವಶ್ಯಕತೆ ಬಿದ್ದಲ್ಲಿ ಖಾಸಗಿ ಬೋರ್‌ವೆಲ್ ಮಾಲೀಕರಿಗೆ ಹಣ ನೀಡಿ, ಅವರಿಂದ ನೀರನ್ನು ಪಡೆದು ಸಾರ್ವಜನಿಕರಿಗೆ ಸರಬರಾಜು ಮಾಡಲು ಸೂಕ್ತ ಕ್ರೀಯಾ ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದು ಡಿಸಿಎಂ ಭರವಸೆ ನೀಡಿದರು.
