ಕಂದಾಯ ಇಲಾಖೆಯಲ್ಲಿನ ಹಳೆಯ ತಪ್ಪು ಹಾಗೂ ಲೋಪದೋಷಗಳನ್ನು ಸರಿಪಡಿಸುವುದೇ ಪ್ರಸ್ತುತ ನಮ್ಮ ಮುಂದಿರುವ ಅತಿ ದೊಡ್ಡ ಸವಾಲಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.


ಬೆಳಗಾವಿಯ ಸುವರ್ಣ ಸೌಧದಲ್ಲಿ ಇಂದು ಕಂದಾಯ ಇಲಾಖೆ ದಿನಾಚರಣೆಯನ್ನು ಅತ್ಯಂತ ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿತ್ತು. ಡಿಸಿಎಂ ಡಾ. ಜಿ. ಪರಮೇಶ್ವರ್, ಸರ್ಕಾರದ ಅಪರ ಕಾರ್ಯದರ್ಶಿ ರಾಜೇಂದ್ರಕುಮಾರ ಕಟಾರಿಯಾ, ಪ್ರಾದೇಶಿಕ ಆಯುಕ್ತೆ ಜಾನಕಿ ಕೆ.ಎಂ ಮತ್ತು ಬೆಳಗಾವಿ ಜಿಲ್ಲಾಧಿಕಾರಿ ಮೊಹ್ಮದ್ ರೋಷನ್ ಸೇರಿದಂತೆ ಬೆಳಗಾವಿ ವಿಭಾಗದ ವಿವಿಧ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾಮಟ್ಟದ ಹಿರಿಯ ಅಧಿಕಾರಿಗಳು ಜಂಟಿಯಾಗಿ ದೀಪ ಬೆಳಗುವ ಮೂಲಕ ಸಮಾರಂಭಕ್ಕೆ ಅಧಿಕೃತ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರು, “ದಿ ಚಾಲೆಂಜ್ ಬಿಫೋರ್ ಅಸ್ ಈಸ್ ಟು ಕರೆಕ್ಟ್ ದೋಸ್ ಎರರ್ಸ್” (ನಮ್ಮ ಮುಂದಿರುವ ಸವಾಲೆಂದರೆ ಆ ತಪ್ಪುಗಳನ್ನು ಸರಿಪಡಿಸುವುದು) ಎಂದು ಮಾರ್ಮಿಕವಾಗಿ ನುಡಿದರು. ಕಂದಾಯ ಇಲಾಖೆಯು ಹಳೆಯ ತಪ್ಪುಗಳನ್ನು ಸರಿಪಡಿಸುವ ಅತ್ಯಂತ ದೊಡ್ಡ ಜವಾಬ್ದಾರಿಯನ್ನು ಹೊರಬೇಕಿದೆ ಎಂದ ಅವರು, ಇಂತಹ ಜಟಿಲ ಸಮಸ್ಯೆಗಳನ್ನು ಬಗೆಹರಿಸಲು ಕಡ್ಡಾಯವಾಗಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಇದೇ ವೇಳೆ ರಾಜ್ಯದಲ್ಲಿರುವ ಅನೇಕ ಗೊಲ್ಲರಹಟ್ಟಿ, ಹಟ್ಟಿ ಮತ್ತು ಬೋವಿ ಹಟ್ಟಿಗಳು ಇನ್ನೂ ಕಂದಾಯ ಗ್ರಾಮಗಳಾಗದ ಕಾರಣ ಅವರಿಗೆ ಸರ್ಕಾರಿ ಸೌಲಭ್ಯಗಳು ಸಿಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ ಅವರು, ಇವುಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಲು ದೀರ್ಘಕಾಲ ತಗೆದುಕೊಳ್ಳುತ್ತಿರುವುದು ಆಡಳಿತ ವ್ಯವಸ್ಥೆಯ ಲೋಪ ಎಂದರು.

ಮುಂದುವರಿದು ಕಂದಾಯ ವ್ಯವಸ್ಥೆಯ ಇತಿಹಾಸವನ್ನು ಬಿಚ್ಚಿಟ್ಟ ಡಿಸಿಎಂ, ಪ್ರಾಚೀನ ಬ್ಯಾಬಿಲೋನ್ನಿಂದ ಹಿಡಿದು ಮಹಾಭಾರತದಲ್ಲಿ ಭೀಷ್ಮರು ದುರ್ಯೋಧನನಿಗೆ ನೀಡಿದ ವಿವರಣೆಗಳವರೆಗೆ ಈ ಇಲಾಖೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ ಎಂದರು. ಬ್ರಿಟಿಷರ ಕಾಲದಲ್ಲಿ ಕಠಿಣ ಕ್ರಮಗಳ ಮೂಲಕ ಶೇಕಡಾ 50 ರಷ್ಟು ಕಂದಾಯ ವಸೂಲಿ ಮಾಡಲಾಗುತ್ತಿತ್ತು ಮತ್ತು ಅದರ ವಿರುದ್ಧ ಇಡೀ ಜನಸಮುದಾಯ ತಿರುಗಿಬೀಳುತ್ತಿತ್ತು ಎಂಬುದನ್ನು ನೆನಪಿಸಿಕೊಂಡರು. ಸದ್ಯ ಆಧುನಿಕ ತಂತ್ರಜ್ಞಾನದ ನೆರವಿನಿಂದ ಪ್ರತಿಯೊಂದು ಜಮೀನಿಗೂ ನಕ್ಷೆ ಸಿದ್ಧಪಡಿಸುತ್ತಿರುವ ಇಲಾಖೆಯ ಹೊಸ ಹೆಜ್ಜೆಯನ್ನು ಅವರು ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಸಾಧಕರನ್ನು ಸತ್ಕರಿಸಲಾಯಿತು. ಕಂದಾಯ ಇಲಾಖೆಯ ನೂರಾರು ಅಧಿಕಾರಿಗಳು ಉಪಸ್ಥಿತರಿದ್ದರು.

