ಶಿಕ್ಷಣವೇ ಶಕ್ತಿ..ಆದ್ರೆ ಇವತ್ತಿನ ದಿನಗಳಲ್ಲಿ ಬಡತನದ ಕಾರಣಕ್ಕೆ ಎಷ್ಟೋ ಮಕ್ಕಳು ಶಿಕ್ಷಣದಿಂದ ವಂಚಿತರಾಗ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ತಾವೇ ಅನುಭವಿಸಿದ ಬಡತನದ ನೋವನ್ನು ನೆನೆದು, ಅನಾಥ ಹಾಗೂ ಬಡ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ ಚಿಕ್ಕೋಡಿಯ ಈ ಸರ್ಕಾರಿ ಶಾಲೆಯ ಶಿಕ್ಷಕರು. ತಮ್ಮ ಸಂಬಳದ ವಾರ್ಷಿಕ 1 ಲಕ್ಷ ರೂಪಾಯಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮೀಸಲಿಟ್ಟು ಮಾದರಿಯಾಗಿದ್ದಾರೆ. ಅಷ್ಟಕ್ಕೂ ಆ ಶಿಕ್ಷಕ ಯಾರು ಅಂತೀರಾ ಹಾಗಾದ್ರೆ ಈ ಸ್ಟೋರಿ ನೋಡಿ


ಚಿಕ್ಕೋಡಿ ತಾಲೂಕಿ ನವಲಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಡಾ. ವಿಶ್ವನಾಥ ಧುಮಾಳ ಕಳೆದ 7 ವರ್ಷಗಳಿಂದ ನಿರಂತರವಾಗಿ ಅನಾಥ ಮತ್ತು ಆರ್ಥಿಕವಾಗಿ ಹಿಂದುಳಿದ ಬಡ ಮಕ್ಕಳ ಶಿಕ್ಷಣಕ್ಕೆ ಆಸರೆಯಾಗುತ್ತಿದ್ದಾರೆ. ವಿವಿಧ ಶಾಲೆಗಳ 75 ತಂದೆ-ತಾಯಿ ಇಲ್ಲದ ಬಡ ಮಕ್ಕಳು ಹಾಗೂ ಆದರ್ಶ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ದತ್ತು ಪಡೆದಿರುವ ಇವರು, ಮಕ್ಕಳಿಗೆ ಬೇಕಾದ ಬ್ಯಾಗ್, ಬುಕ್, ಪೆನ್ನು, ಕಂಪಾಸ್ ಬಾಕ್ಸ್ ಒಳಗೊಂಡ ಶೈಕ್ಷಣಿಕ ಕಿಟ್ಗಳನ್ನು ವಿತರಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಇದರ ಜೊತೆಗೆ ಕಾಲಕಾಲಕ್ಕೆ ಈ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆಯನ್ನು ಸಹ ಮಾಡಿಸುತ್ತಿದ್ದಾರೆ.ನಾನು ಕೂಡ ಬಡತನದಲ್ಲೇ ಬೆಳೆದು ಬಂದವನು. ಬಡತನದ ಕಷ್ಟ ಮತ್ತು ನೋವುಗಳು ಹೇಗಿರುತ್ತವೆ ಎಂಬುದು ನನಗೆ ಚೆನ್ನಾಗಿ ಗೊತ್ತಿದೆ. ಈಗಿನ ವಿದ್ಯಾರ್ಥಿಗಳು ಅಂತಹ ಕಷ್ಟ ಅನುಭವಿಸಬಾರದು, ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ನನ್ನ ವೈಯಕ್ತಿಕ ಸಂಬಳದ ಒಂದು ಭಾಗವನ್ನು ಸಮಾಜ ಸೇವೆಗೆ ಮೀಸಲಿಟ್ಟಿದ್ದೇನೆ. ಇಂದು ಗ್ರಾಮದ ಹಿರಿಯರು ಮತ್ತು ಇಲಾಖೆಯ ಅಧಿಕಾರಿಗಳ ಸಮುಖದಲ್ಲಿ 75 ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆ ಶಿಬಿರ ಹಾಗೂ ಶೈಕ್ಷಣಿಕ ಕಿಟ್ ವಿತರಿಸಿದ್ದೇವೆ ಎನ್ನುತ್ತಾರೆ ಡಾ! ವಿಶ್ವನಾಥ ಧುಮಾಳ
ನಿವೃತ ಶಿಕ್ಷಕ ಚಂದ್ರಶೇಖರ ಅರಭಾವಿ ಮಾತನಾಡಿ ಶೈಕ್ಷಣಿಕ ಮಹತ್ತರ ಕಾರ್ಯವನ್ನು ಕೈಗೊಳ್ಳುತ್ತಿರುವುದು ಧುಮಾಳ ಕಾರ್ಯ ವಿಶೇಷತೆಯಾಗಿದೆ. ಸಮಾಜದ ಹಿತವನ್ನು ಬಯಸುವ ಡಾ. ಧುಮಾಳ ಅವರ ಈ ಕಾರ್ಯ ಪ್ರಶಂಸನೀಯ ಎಂದರು.
ಈ ಸಂದರ್ಭದಲ್ಲಿ ಎನ್.ಜಿ.ಪಾಟೀಲ, ಜಯರಾಮ ಘೋರ್ಪಡೆ, ಹರಿದಾಸ ಖಾಡೆ, ಎಮ್.ಟಿ.ಜನಗೌಡರ, ಮಹಮ್ಮದ್ ಮೋಕಾಶಿ, ಸಂಜಯ ಚನ್ನಪನವರ, ಲಕ್ಷ್ಮಣ ಖಡ್ಡ, ಮಾಯಪ್ಪಾ ನಸಲಾಪೂರೆ, ಸುರೇಶ ಚೌಗಲೆ, ರುದ್ರಗೌಡ ಪಾಟೀಲ, ಪರಶುರಾಮ ಹೆಗಡೆ, ಪಿಂಟು ಲಟ್ಟೆ ಹಾಗೂ ನಿಲಕಂಠ ಸ್ವಾಮಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು, ಡಾ.ಧುಮಾಳ ಅವರ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಒಟ್ಟಿನಲ್ಲಿ ತಮ್ಮ ಸ್ವಂತ ಗಳಿಕೆಯಲ್ಲಿ ಬಡ ಮಕ್ಕಳ ಬಾಳಿಗೆ ಬೆಳಕಾಗುತ್ತಿರುವ ಡಾ. ವಿಶ್ವನಾಥ ಧುಮಾಳ ಅವರ ಕಾರ್ಯ ನಿಜಕ್ಕೂ ಎಲ್ಲರಿಗೂ ಪ್ರೇರಣೆಯಾಗಿದೆ.
ಡಿ.ಕೆ.ಉಪ್ಪಾರ ಇನ್ ನ್ಯೂಸ್ ಚಿಕ್ಕೋಡಿ
