ಕಳೆದ ಒಂದು ತಿಂಗಳಿಂದ ಸಂಪೂರ್ಣವಾಗಿ ಬತ್ತಿ ಹೋಗಿ ಒಣಗಿದ್ದ ಕೃಷ್ಣಾ ನದಿಗೆ ಕೊನೆಗೂ ಹೊಸ ನೀರು ಹರಿದು ಬಂದಿದೆ. ಇದರಿಂದಾಗಿ ಕಳೆದ ಹಲವು ದಿನಗಳಿಂದ ತೀವ್ರ ನೀರಿನ ಸಮಸ್ಯೆಯಿಂದ ಕಂಗಾಲಾಗಿದ್ದ ನದಿತೀರದ ಜನಸಾಮಾನ್ಯರು ಹಾಗೂ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಕೃಷ್ಣಾ ನದಿ ಒಣಗಿದ್ದರಿಂದ ನದಿತೀರದ ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ತೀವ್ರ ಸಮಸ್ಯೆ ಉಂಟಾಗಿತ್ತು. ಕೇವಲ ಜನರಿಗಷ್ಟೇ ಅಲ್ಲದೆ, ಜಾನುವಾರುಗಳಿಗೆ ಕುಡಿಯಲು ಹನಿ ನೀರಿಲ್ಲದೆ ಪರಿಸ್ಥಿತಿ ಕೈಮೀರಿತ್ತು. ಇದರೊಂದಿಗೆ ನಂಬಿಕೊಂಡಿದ್ದ ಕೈಗೆ ಬಂದ ಬೆಳೆಗಳು ಕಣ್ಣೆದುರೇ ಒಣಗುತ್ತಿರುವುದನ್ನು ಕಂಡು ರೈತರು ಅಸಹಾಯಕರಾಗಿದ್ದರು. ಕೃಷಿ ಮತ್ತು ಕುಡಿಯುವ ನೀರಿಗಾಗಿ ನದಿತೀರದ ಗ್ರಾಮಸ್ಥರು ಹಾಹಾಕಾರ ಪಡುವಂತಾಗಿತ್ತು.
ಪ್ರಸ್ತುತ ಕೃಷ್ಣಾ ನದಿಗೆ ನೀರು ಹರಿದು ಬರುತ್ತಿದ್ದು, ಕಲ್ಲೋಳ, ಯಡೂರ, ಮಾಂಜರಿ, ಅಂಕಲಿ, ಚಂದೂರ, ಇಂಗಳಿ, ಬಾವನಸೌಂದತ್ತಿ, ದಿಗ್ಗೆವಾಡಿ ಸೇರಿದಂತೆ ನದಿತೀರದ ವಿವಿಧ ಗ್ರಾಮಗಳ ವ್ಯಾಪ್ತಿಯಲ್ಲಿ ನದಿಯು ಮತ್ತೆ ಜೀವಕಳೆಯನ್ನು ಪಡೆದುಕೊಳ್ಳುತ್ತಿದೆ. ನೀರು ಹರಿದು ಬರುತ್ತಿರುವ ದೃಶ್ಯವನ್ನು ಕಂಡು ನದಿತೀರದ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜ್‌ನಿಂದ ಕೃಷ್ಣಾ ನದಿಗೆ ನೀರನ್ನು ಹರಿಬಿಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮಹಾರಾಷ್ಟ್ರದಿಂದ ಹರಿದು ಬಂದಿರುವ ಈ ನೀರು ಸದ್ಯಕ್ಕೆ ಗಡಿಭಾಗದ ಹಳ್ಳಿಗಳ ನೀರಿನ ದಾಹವನ್ನು ತಣಿಸಿದೆ.
ಒಟ್ಟಿನಲ್ಲಿ ಕೃಷ್ಣೆಯ ಒಡಲು ತುಂಬುತ್ತಿರುವುದು ನದಿತೀರದ ಜನ ಜಾನುವಾರುಗಳಿಗೆ ಹಾಗೂ ರೈತಾಪಿ ವರ್ಗಕ್ಕೆ ದೊಡ್ಡ ಆಸರೆಯಾಗಿ ಪರಿಣಮಿಸಿದೆ.
ಡಿ.ಕೆ.ಉಪ್ಪಾರ ಇನ್ ನ್ಯೂಸ್ ಚಿಕ್ಕೋಡಿ.
