Belagavi

ಬೆಳಗಾವಿ ಜೂಡೋ ವಸತಿ ನಿಲಯ ಸ್ಥಳಾಂತರಕ್ಕೆ ತೀವ್ರ ವಿರೋಧ: ಡಿಸಿಎಂ ಪರಮೇಶ್ವರ್‌ಗೆ ಪೋಷಕರಿಂದ ಮನವಿ

Share

ಬೆಳಗಾವಿಯ ಕ್ರೀಡಾ ವಸತಿ ನಿಲಯದ ಜೂಡೋ ಕ್ರೀಡಾಪಟುಗಳನ್ನು ಚಿಕ್ಕಮಗಳೂರಿಗೆ ಸ್ಥಳಾಂತರಿಸುವ ಸರ್ಕಾರದ ನಿರ್ಧಾರಕ್ಕೆ ಪೋಷಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಇಂದು ಬೆಳಗಾವಿಗೆ ಆಗಮಿಸಿದ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರಿಗೆ ಪೋಷಕರು ಮನವಿ ಸಲ್ಲಿಸಿ, ಸ್ಥಳಾಂತರ ಆದೇಶವನ್ನು ತಕ್ಷಣವೇ ರದ್ದುಗೊಳಿಸುವಂತೆ ಒತ್ತಾಯಿಸಿದ್ದಾರೆ.

ಬೆಳಗಾವಿಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧೀನದಲ್ಲಿರುವ ಜೂಡೋ ಕ್ರೀಡಾ ವಸತಿ ನಿಲಯವನ್ನು ಚಿಕ್ಕಮಗಳೂರಿಗೆ ಸ್ಥಳಾಂತರಿಸುವ ಸರ್ಕಾರದ ಆದೇಶಕ್ಕೆ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು ಜಿಲ್ಲೆಗೆ ಆಗಮಿಸಿದ ಡಿಸಿಎಂ ಜಿ. ಪರಮೇಶ್ವರ್ ಅವರನ್ನು ಭೇಟಿಯಾದ ಪೋಷಕರ ನಿಯೋಗ, ಸ್ಥಳಾಂತರ ಪ್ರಕ್ರಿಯೆಯನ್ನು ಕೈಬಿಡುವಂತೆ ಕೋರಿ ಅಧಿಕೃತ ಮನವಿ ಪತ್ರವನ್ನು ಸಲ್ಲಿಸಿತು. ಕ್ರೀಡಾ ನಿಲಯದಲ್ಲಿ ಕಲಿಯುತ್ತಿರುವ ಮಕ್ಕಳ ಶೈಕ್ಷಣಿಕ ಹಾಗೂ ಕ್ರೀಡಾ ಭವಿಷ್ಯದ ಹಿತದೃಷ್ಟಿಯಿಂದ ಈ ನಿರ್ಧಾರ ಅತ್ಯಂತ ಹಾನಿಕಾರಕ ಎಂದು ಪೋಷಕರು ಕಳವಳ ವ್ಯಕ್ತಪಡಿಸಿದ್ದಾರೆ.

ಈ ವೇಳ ಮಕ್ಕಳ ಪೋಷಕರು ಮಾತನಾಡಿ, ಬೆಳಗಾವಿಯಲ್ಲಿ ಈಗಾಗಲೇ ಮಕ್ಕಳಿಗೆ ಸೂಕ್ತ ಮಾಧ್ಯಮದ ಶಾಲೆಗಳಲ್ಲಿ ಪ್ರವೇಶಾತಿ (ಅಡ್ಮಿಷನ್) ಕೊಡಿಸಲಾಗಿದೆ. ಜೂಡೋ ತರಬೇತಿಯಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಚಿನ್ನದ ಪದಕಗಳನ್ನು ಗೆದ್ದು ಸಾಧನೆ ಮಾಡಿರುವ ಈ ಮಕ್ಕಳನ್ನು ಈಗ ಏಕಾಏಕಿ ನೂರಾರು ಕಿಲೋಮೀಟರ್ ದೂರದ ಚಿಕ್ಕಮಗಳೂರಿಗೆ ವರ್ಗಾಯಿಸಿದರೆ ಅವರ ಮಾನಸಿಕ ಸ್ಥಿತಿ ಹಾಗೂ ಶಿಕ್ಷಣದ ಮೇಲೆ ತೀವ್ರ ವ್ಯತಿರಿಕ್ತ ಪರಿಣಾಮ ಬೀರಲಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಮಕ್ಕಳನ್ನು ಇಲ್ಲಿಂದ ಕಳುಹಿಸಬಾರದು ಎಂದು ಒತ್ತಾಯಿಸಿದರು.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಈಗಾಗಲೇ ಪೋಷಕರ ಪರವಾಗಿ ಸರ್ಕಾರಕ್ಕೆ ಬಲವಾದ ಶಿಫಾರಸು ಪತ್ರವನ್ನು ಬರೆದಿದ್ದಾರೆ. ವರ್ಷ 2000 ದಿಂದಲೂ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಾ 50ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಕ್ರೀಡಾಪಟುಗಳನ್ನು ದೇಶಕ್ಕೆ ನೀಡಿದ ಈ ಜೂಡೋ ಕೇಂದ್ರವನ್ನು ಬೆಳಗಾವಿಯಲ್ಲೇ ಮುಂದುವರಿಸಬೇಕು ಎಂದು ಪಾಲಕರು ಮತ್ತು ವಿದ್ಯಾರ್ಥಿಗಳು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಮನವಿ ಸ್ವೀಕರಿಸಿದ ಗೃಹಸಚಿವ ಜಿ. ಪರಮೇಶ್ವರ ಅವರು ಸಕಾರಾತ್ಮಕ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದರು. ಈ ಕುರಿತು ಸಂಬಂಧಪಟ್ಟ ಇಲಾಖೆಯ ಉಪನಿರ್ದೇಶಕರೊಂದಿಗೆ ಚರ್ಚಿಸುವುದಾಗಿ ಭರವಸೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಜೂಡೋ ವಿದ್ಯಾರ್ಥಿಗಳ ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ಧರು.

Tags:

error: Content is protected !!