ರಾಜ್ಯಾದ್ಯಂತ ಇಂದಿನಿಂದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SSR) ಪ್ರಕ್ರಿಯೆ ಅಧಿಕೃತವಾಗಿ ಆರಂಭಗೊಂಡಿದೆ. ಬಿಎಲ್‌ಓಗಳು ಖುದ್ದು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದು, ಇದರ ಭಾಗವಾಗಿ ಖಾನಾಪೂರ ತಾಲೂಕಿನಲ್ಲಿ ಮಾಜಿ ಶಾಸಕ ದಿಗಂಬರ ಪಾಟೀಲರ ಕುಟುಂಬಸ್ಥರಿಗೆ ಇಆರ್‌ಓ ಬಲರಾಮ್ ಚೌವ್ಹಾಣ್ ಅವರು ಫಾರ್ಮ್ ವಿತರಿಸುವ ಮೂಲಕ ಈ ಮಹತ್ವದ ಆಡಳಿತಾತ್ಮಕ ಪ್ರಕ್ರಿಯೆಗೆ ವಿದ್ಯುಕ್ತ ಚಾಲನೆ ನೀಡಿದ್ದಾರೆ.

ಖಾನಾಪೂರ ತಾಲೂಕಿನಲ್ಲಿ ಇಂದಿನಿಂದ ಮನೆ ಮನೆಗೆ ತೆರಳಿ ಮತದಾರರ ಮಾಹಿತಿ ಪರಿಷ್ಕರಿಸುವ ಕಾರ್ಯ ಚುರುಕುಗೊಂಡಿದ್ದು, ತಾಲೂಕಿನ ಗಣ್ಯರ ಮನೆಗಳಿಗೆ ಅಧಿಕಾರಿಗಳ ತಂಡ ಭೇಟಿ ನೀಡುತ್ತಿದೆ. ಉದ್ಘಾಟನಾ ಪ್ರಕ್ರಿಯೆಯ ಈ ಸಂದರ್ಭದಲ್ಲಿ ತಹಶೀಲ್ದಾರ್ ಹಾಗೂ ಎಇಆರ್‌ಓ ಆದ ದುಂಡಪ್ಪ ಕೋಮಾರ, ಸುನೀಲ್ ದೇಸಾಯಿ, ಪತ್ರಕರ್ತ ವಾಸುದೇವ ಚೌಗಲೆ ಸೇರಿದಂತೆ ಜಾಂಬೋಟಿ ವಿಭಾಗದ ಕಂದಾಯ ನಿರೀಕ್ಷಕರು, ಸಂಬಂಧಿತ ಬಿಎಲ್‌ಓಗಳು ಹಾಗೂ ತಹಶೀಲ್ದಾರ್ ಕಚೇರಿಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಮಾಜಿ ಶಾಸಕ ದಿಗಂಬರ ಪಾಟೀಲರ ಕುಟುಂಬಕ್ಕೆ ಫಾರ್ಮೇಟ್ ನೀಡಿದ ಬೆನ್ನಲ್ಲೇ, ಮುಂದುವರಿದ ಭಾಗವಾಗಿ ಮತ್ತೊಬ್ಬ ಮಾಜಿ ಶಾಸಕ ಅರವಿಂದ ಪಾಟೀಲ ಅವರಿಗೂ ಖುದ್ದು ಭೇಟಿ ನೀಡಿ ಈ ವಿಶೇಷ ಪರಿಷ್ಕರಣಾ ಫಾರ್ಮೇಟ್ ನೀಡಿ ತಾಲೂಕಿನಾದ್ಯಂತ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
