ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಾಲಾ ಶಿಕ್ಷಣ ಇಲಾಖೆ (ಪದವಿ-ಪೂರ್ವ) ಹಾಗೂ ಕಿಟೆಲ್ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯ ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ಧಾರವಾಡದ ಕಿಟೆಲ್ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಮಾದಕ ವಸ್ತು ದುರುಪಯೋಗ ಹಾಗೂ ಅಕ್ರಮ ಸಾಗಾಣಿಕೆ ವಿರೋಧಿ ದಿನ ಕುರಿತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳಲಾಗಿತ್ತು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಎನ್. ವಿ. ವಿಜಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಾದಕ ವಸ್ತು ಸೇವನೆ, ಸಾಗಣೆ ಹಾಗೂ ಅದನ್ನು ಬೆಳೆಯುವದರಿಂದ ಇರುವ ಕಾನೂನಿನ ಶಿಕ್ಷೆ ಹಾಗೂ ದಂಡದ ಕುರಿತು ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ಮಾಡಿ, ರೈತರು ತಮ್ಮ ಹೊಲಗಳಲ್ಲಿ ಮಾದಕ ವಸ್ತುಗಳನ್ನು ಬೆಳೆಸುವುದು ಕಾನೂನಾತ್ಮಕ ಅಪರಾಧವಾಗಿದೆ. ಇದರ ಬಗ್ಗೆ ರೈತರಿಗೆ ಜಾಗೃತಿಯನ್ನು ಮೂಡಿಸಬೇಕೆಂದು ವಿದ್ಯಾರ್ಥಿಗಳಿಗೆ ಕರೆನೀಡಿದರು. ನಿಮ್ಮ ಸುತ್ತಮುತ್ತ ಯಾರಾದರೂ ಮಾದಕ ವಸ್ತು ವ್ಯಸನಿಗಳಿದ್ದರೆ, ಅವರನ್ನು ಅದರಿಂದ ಮುಕ್ತಗೊಳಿಸಲು ಪ್ರಯತ್ನಿಸಿ ಎಂದು ತಿಳಿಸಿ ವಿದ್ಯಾರ್ಥಿಗಳಿಗೆ ಪೋಕ್ಸೊ ಕಾಯಿದೆಯ ಅಧಿನಿಯಮದ ಕುರಿತು ಅರಿವಿರಬೇಕು ಎಂದು ಕಿವಿಮಾತು ಹೇಳಿದರು.
ಧಾರವಾಡದ ಶಾಲಾ ಶಿಕ್ಷಣ ಇಲಾಖೆ (ಪದವಿ-ಪೂರ್ವ)ಯ ಉಪ ನಿರ್ದೇಶಕಿ ಡಾ. ತೇಜಸ್ವಿನಿ ನಾರಾಯಣಕರ ಅವರು ಮಾತಾನಾಡಿ, ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡಲು ನಾವೆಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸಬೇಕು. ಇದಕ್ಕಾಗಿ ಶಾಲಾ ಶಿಕ್ಷಣ ಇಲಾಖೆ ನಿರಂತರವಾಗಿ ಶ್ರಮಿಸುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯೆ ಸವಿತಾ ಎಸ್. ನಂದಿಕೇಶ್ವರ ಅವರು ಮಾತನಾಡಿ, ಮಾದಕ ವಸ್ತು ಸೇವನೆಯಿಂದ ಯುವ ಜನತೆ ಮಾನಸಿಕ ಖಿನ್ನತೆಗೆ ಒಳಗಾಗಿ ತನ್ನತನವನ್ನು ಕಳೆದುಕೊಂಡು ತನ್ನ ಶೈಕ್ಷಣಿಕ ಗುರಿಯಿಂದ ವಿಮುಖರಾಗುವರು. ಇದ್ದರಿಂದ ಕುಟುಂಬದವರಿಗೂ ತೊಂದರೆಯನ್ನು ಉಂಟುಮಾಡುವರು. ಆದ್ದರಿಂದ ನಾವೆಲ್ಲಾ ಪ್ರಜ್ಞಾವಂತರಾಗಿ ವ್ಯಸನಮುಕ್ತ ಸಮಾಜ ನಿರ್ಮಿಸಲು ಶ್ರಮಿಸೋಣ. ಬದಲಾವಣೆ ನಮ್ಮಿಂದಲೆ ಆರಂಭವಾಗಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಡಾ. ಮೋಹನ ಕುಮಾರ ಥಂಬದ ಹಾಗೂ ಡಾ. ಅಶೋಕ ಕೋರಿ ಉಪಸ್ಥಿತರಿದ್ದರು.
