ಆಸ್ತಿ ಮಾರಾಟ ವಿಚಾರವಾಗಿ ದಾಯಾದಿಗಳ ನಡುವೆ ನಡೆದ ಮಾರಾಮಾರಿಯಲ್ಲಿ ತಮ್ಮನನ್ನು ಅಣ್ಣನೇ ಕೊಲೆ ಮಾಡಿದ ಘಟನೆ ಹುಕ್ಕೇರಿ ತಾಲೂಕಿನ ಘೋಡಗೇರಿ ಗ್ರಾಮದಲ್ಲಿ ನಡೆದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಹೇಳಿದರು.

ಬೆಳಗಾವಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಅವರು ಮಾತನಾಡಿದರು. ಮೃತನನ್ನು ರಾಜು ಸಿದ್ದಪ್ಪ ರುದ್ರಪ್ಪಗೋಳ (45) ಎಂದು ಗುರುತಿಸಲಾಗಿದ್ದು, ಆತನ ಅಣ್ಣ ಸಂಜು ರುದ್ರಪ್ಪಗೋಳ (49) ಕೊಲೆ ಆರೋಪಿಯಾಗಿದ್ದಾನೆ. ಘೋಡಗೇರಿ ಗ್ರಾಮದಲ್ಲಿರುವ ಮೂರು ಎಕರೆ ಜಮೀನು ಮಾರಾಟ ಮಾಡುವ ವಿಚಾರವಾಗಿ ಇಬ್ಬರು ಸಹೋದರರ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಜಗಳ ತಾರಕಕ್ಕೇರಿದ್ದು, ಆರೋಪಿ ಸಂಜು ತನ್ನ ತಮ್ಮ ರಾಜು ಅವರ ತಲೆಗೆ ಕಲ್ಲಿನಿಂದ ಹೊಡೆದುಹಾಗೂ ಕುತ್ತಿಗೆ ಹಿಸುಕಿ ಹತ್ಯೆ ಮಾಡಿದ್ದಾನೆ ಎಂದರು.
ಇಬ್ಬರು ಸಹೋದರರು ಗೋಕಾಕ ತಾಲೂಕಿನ ಅಂಕಲಗಿ ಗ್ರಾಮದ ಪಾಳುಬಿದ್ದ ಕಟ್ಟಡವೊಂದರಲ್ಲಿ ವಾಸಿಸುತ್ತಿದ್ದು, ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಪ್ರತಿದಿನ ರಾತ್ರಿ ಅಂಕಲಗಿ ಮಠದಲ್ಲಿ ಊಟ ಮಾಡಿ ಬಳಿಕ ಅದೇ ಕಟ್ಟಡದಲ್ಲಿ ಉಳಿಯುತ್ತಿದ್ದರು.ಘಟನೆ ಸಂಬಂಧ ಎರಡೂ ಕುಟುಂಬಗಳಿಂದ ಯಾವುದೇ ದೂರು ದಾಖಲಾಗಿರಲಿಲ್ಲ ಎಂದರು.
