ಬೆಳಗಾವಿ ಮಹಾನಗರದಲ್ಲಿ ಪಾದಚಾರಿ ಮಾರ್ಗಗಳನ್ನು ಆಕ್ರಮಿಸಿಕೊಂಡಿದ್ದ ಅಂಗಡಿ ಮುಂಗಟ್ಟುಗಳ ವಿರುದ್ಧ ಮಹಾನಗರ ಪಾಲಿಕೆ ಇಂದು ಖಡಕ್ ಕಾರ್ಯಾಚರಣೆ ಕೈಗೊಂಡಿದೆ. ಅನಗೋಳ ಮುಖ್ಯ ರಸ್ತೆಯಲ್ಲಿ ಸಾರ್ವಜನಿಕರಿಗೆ ಹಾಗೂ ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಜೆಸಿಬಿಗಳೊಂದಿಗೆ ಧಾವಿಸಿದ ಅಧಿಕಾರಿಗಳು ಅತಿಕ್ರಮಣ ತೆರವುಗೊಳಿಸಿದ್ದಾರೆ.

ಬೆಳಗಾವಿಯ ಅನಗೋಳ ಮುಖ್ಯ ರಸ್ತೆಯಲ್ಲಿ ಸಾರ್ವಜನಿಕ ಫುಟ್ಪಾತ್ ಹಾಗೂ ಚರಂಡಿಗಳ ಮೇಲೆ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಟಿನ್ ಶೆಡ್ ಹಾಗೂ ಅಂಗಡಿಗಳ ತೆರವು ಕಾರ್ಯಾಚರಣೆಯನ್ನು ಮಹಾನಗರ ಪಾಲಿಕೆ ಯಶಸ್ವಿಯಾಗಿ ನಡೆಸಿದೆ. ಇಲ್ಲಿನ ರಸ್ತೆ ಬದಿಗಳನ್ನು ವ್ಯಾಪಾರಿಗಳು ಆಕ್ರಮಿಸಿಕೊಂಡಿದ್ದರಿಂದ ಶಾಲಾ ಮಕ್ಕಳು, ಮಹಿಳೆಯರು ಹಾಗೂ ಪಾದಚಾರಿಗಳು ಸಂಚರಿಸಲು ತೀವ್ರ ತೊಂದರೆ ಅನುಭವಿಸುತ್ತಿದ್ದರು. ಅಲ್ಲದೆ ಇದು ಸಂಚಾರ ದಟ್ಟಣೆ ಹಾಗೂ ಅಪಘಾತಗಳಿಗೂ ಕಾರಣವಾಗುತ್ತಿತ್ತು. ಈ ಬಗ್ಗೆ ಸಾರ್ವಜನಿಕರಿಂದ ಸರಣಿ ದೂರುಗಳು ಬಂದ ಹಿನ್ನೆಲೆಯಲ್ಲಿ ಎಚ್ಚೆತ್ತ ಮಹಾನಗರ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಸುಮಾರು 10ಕ್ಕೂ ಹೆಚ್ಚು ಅನಧಿಕೃತ ಶೆಡ್ ಹಾಗೂ ಕಟ್ಟಡಗಳನ್ನು ನೆಲಸಮಗೊಳಿಸಿ ಸಾರ್ವಜನಿಕ ಮಾರ್ಗವನ್ನು ಮುಕ್ತಗೊಳಿಸಿದರು. (ಫ್ಲೋ)
ಕಾರ್ಯಾಚರಣೆ ಕುರಿತು ಮಾಹಿತಿ ನೀಡಿದ ಮಹಾನಗರ ಪಾಲಿಕೆ ಆಯುಕ್ತ ಕಾರ್ತಿಕ್ ಎಂ. ಅವರು, ಮಾನ್ಯ ಉಚ್ಛ ನ್ಯಾಯಾಲಯದ ಆದೇಶದನ್ವಯ ಪ್ರತಿ ವಾರವೂ ನಗರದ ವಿವಿಧ ಭಾಗಗಳಲ್ಲಿ ಅಕ್ಷನ್ ಪ್ಲಾನ್ ಮಾಡಿಕೊಂಡು ಅತಿಕ್ರಮಣ ತೆರವು ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದರು. ಅನಗೋಳ ರಸ್ತೆ ಬಳಿಕ ಮುಂದಿನ ವಾರ ಖಾನಾಪುರ ರಸ್ತೆಯಲ್ಲೂ ಈ ಕಾರ್ಯಾಚರಣೆ ಮುಂದುವರಿಯಲಿದೆ. ಸರ್ಕಾರ ಮತ್ತು ಪಾಲಿಕೆ ಯಾವ ಉದ್ದೇಶಕ್ಕೆ ಫುಟ್ಪಾತ್ ಹಾಗೂ ರಸ್ತೆಗಳನ್ನು ನಿರ್ಮಿಸಿದೆಯೋ ಅದಕ್ಕೆ ಮಾತ್ರ ಬಳಸಬೇಕು. ವ್ಯಾಪಾರಿಗಳು ಹಾಗೂ ಸಾರ್ವಜನಿಕರು ತಾವಾಗಿಯೇ ಇಂತಹ ಅನಧಿಕೃತ ಆಕ್ರಮಣಗಳನ್ನು ತೆರವುಗೊಳಿಸಬೇಕು, ಇಲ್ಲದಿದ್ದರೆ ಪಾಲಿಕೆ ಕಠಿಣವಾಗಿ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಿದೆ ಎಂದು ಆಯುಕ್ತರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಬೈಟ್
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಅಭಿಯಂತೆ ಲಕ್ಷ್ಮೀ ನಿಪ್ಪಾಣಿಕರ ಸೇರಿದಂತೆ ಮಹಾನಗರ ಪಾಲಿಕೆ ಅತಿಕ್ರಮಣ ತೆರವು ತಂಡದ ಸಿಬ್ಬಂದಿಗಳು ಭಾಗಿಯಾಗಿದ್ಧರು.
