bagalkot

ದಲಿತ ಜನಾಗ್ರಹ ಸಮಾವೇಶ: ಬೆಂಗಳೂರಿನತ್ತ ದಲಿತ ಸಂಘಟನೆಗಳ ಚಿತ್ತ!

Share

ರಾಜ್ಯದ ದಲಿತ ಸಮುದಾಯಗಳ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜುಲೈ 3ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ‘ದಲಿತ ಜನಾಗ್ರಹ ಸಮಾವೇಶ’ ಆಯೋಜಿಸಲಾಗಿದೆ. ಈ ಕುರಿತು ಬಾಗಲಕೋಟೆ ಜಿಲ್ಲೆಯ ಬೀಳಗಿಯಲ್ಲಿ ಸುದ್ದಿಗೋಷ್ಠಿ ನಡೆಸಿರುವ ಡಿಎಸ್ಎಸ್ (ಅಂಬೇಡ್ಕರ್ ವಾದ) ಜಿಲ್ಲಾ ಮುಖಂಡ ಯುವರಾಜ್ ಬಂಡಿ ಅವರು, ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಕಳೆದ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದಲಿತ ಸಂಘಟನೆಗಳು ಪೂರ್ಣ ಬೆಂಬಲ ನೀಡಿದ್ದವು, ಆದರೆ ಅಧಿಕಾರಕ್ಕೆ ಬಂದ ಬಳಿಕ ಸರ್ಕಾರ ದಲಿತರ ಭರವಸೆಗಳನ್ನು ಈಡೇರಿಸುತ್ತಿಲ್ಲ ಎಂದು ಮುಖಂಡ ಯುವರಾಜ್ ಬಂಡಿ ಆರೋಪಿಸಿದ್ದಾರೆ. ಮುಖ್ಯವಾಗಿ ಎಸ್‌ಸಿಎಸ್‌ಪಿ–ಟಿಎಸ್‌ಪಿ (SCSP-TSP) ಯೋಜನೆಗೆ ಮೀಸಲಾದ ಅನುದಾನವನ್ನು ಬೇರೆಡೆಗೆ ದುರುಪಯೋಗಪಡಿಸಿಕೊಳ್ಳಲಾಗುತ್ತಿದ್ದು, ಯಾವ ಯೋಜನೆಗೆ ನಿಗದಿಯಾದ ಹಣವೋ ಅದನ್ನೇ ಆ ಉದ್ದೇಶಕ್ಕೆ ಬಳಸಬೇಕೆಂದು ಅವರು ಒತ್ತಾಯಿಸಿದ್ದಾರೆ. ಇದರೊಂದಿಗೆ ಭೂಮಿ, ವಸತಿ ರಹಿತರಿಗೆ ಸೌಲಭ್ಯ, ಬಾಕಿ ಉಳಿದಿರುವ ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿ, ವಿಶೇಷ ಘಟಕ ಯೋಜನೆ ಹಾಗೂ ಏಕ ಗವಾಕ್ಷಿ ನೀತಿಯನ್ನು ತಕ್ಷಣ ಜಾರಿಗೆ ತರಬೇಕೆಂದು ಹಕ್ಕೊತ್ತಾಯ ಮಂಡಿಸಿದ್ದಾರೆ. ಸಾಮಾಜಿಕ ನ್ಯಾಯ ಮತ್ತು ಮೀಸಲಾತಿ ರಕ್ಷಣೆಯ ಕುರಿತು ಈ ಸಮಾವೇಶದಲ್ಲಿ ಪ್ರಮುಖ ಚರ್ಚೆಗಳು ನಡೆಯಲಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಕಾರ್ಯಕರ್ತರು ಬೆಂಗಳೂರಿನತ್ತ ಧಾವಿಸಲಿದ್ದಾರೆ. ಆದ್ದರಿಂದ ಸಮುದಾಯದ ಹಕ್ಕುಗಳ ಹೋರಾಟಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಈ ಸಮಾವೇಶದಲ್ಲಿ ಭಾಗವಹಿಸಬೇಕೆಂದು ಯುವರಾಜ್ ಬಂಡಿ ಕರೆ ನೀಡಿದ್ದಾರೆ.

Tags:

error: Content is protected !!