ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ದಾರೋಳಿ ಗ್ರಾಮದಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಹಮ್ಮಿಕೊಳ್ಳಲಾದ ಜಲ ಜೀವನ್ ಮಿಷನ್ ಯೋಜನೆ ಸಂಪೂರ್ಣ ಹಳ್ಳ ಹಿಡಿದಿದೆ. ಕಳಪೆ ಮತ್ತು ಅರ್ಧಂಬರ್ಧ ಕಾಮಗಾರಿಯಿಂದಾಗಿ ಕಳೆದ ಎರಡು ವರ್ಷಗಳಿಂದ ಈ ಯೋಜನೆ ಸಾರ್ವಜನಿಕರಿಗೆ ಯಾವುದೇ ಪ್ರಯೋಜನಕ್ಕೆ ಬಾರದಂತಾಗಿದೆ. ಈ ಬಗ್ಗೆ ತಾಲೂಕು ಪಂಚಾಯತ್ ಇಒ ಅವರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಖಾನಾಪುರ ತಾಲೂಕಿನ ಪಶ್ಚಿಮ ಭಾಗದ ದಟ್ಟ ಅರಣ್ಯ ಹಾಗೂ ಅತ್ಯಂತ ದುರ್ಗಮ ಪ್ರದೇಶದಲ್ಲಿರುವ ನಿಲಾವಡೆ ಗ್ರಾಮ ಪಂಚಾಯತಿ ವ್ಯಾಪ್ತಿಯ ದಾರೋಳಿ ಗ್ರಾಮದಲ್ಲಿ ಎರಡು ವರ್ಷಗಳ ಹಿಂದೆ ಜಲ ಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ, ಈ ಯೋಜನೆಯಲ್ಲಿ ತಾಂತ್ರಿಕ ನಿಯಮಗಳನ್ನು ಗಾಳಿಗೆ ತೂರಿ ಅತ್ಯಂತ ಕಳಪೆ ಮಟ್ಟದ ಕಾಮಗಾರಿ ಮಾಡಲಾಗಿದೆ ಎಂದು ಮಾಜಿ ಗ್ರಾಮ ಪಂಚಾಯತ್ ಸದಸ್ಯ ಯಶವಂತ ಪಾಟೀಲ್ ಹಾಗೂ ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಗ್ರಾಮದಲ್ಲಿ ನಿರ್ಮಿಸಲಾಗಿರುವ ನೀರಿನ ಟ್ಯಾಂಕ್ ಭಾರಿ ಪ್ರಮಾಣದಲ್ಲಿ ಸೋರುತ್ತಿದ್ದು, ಅದು ಯಾವಾಗ ಕುಸಿದು ಬೀಳುತ್ತದೋ ಎಂಬ ಭೀತಿ ಮೂಡಿದೆ. ಇನ್ನು ಗ್ರಾಮದ ನಳಗಳಿಗೆ ನಲ್ಲಿಗಳನ್ನೇ (ತೊಟ್ಟಿ) ಅಳವಡಿಸದ ಕಾರಣ ನೀರು ಅಪಾರವಾಗಿ ಪೋಲಾಗುತ್ತಿದೆ. ಕೋಟ್ಯಂತರ ರೂಪಾಯಿ ಅನುದಾನದ ಈ ಯೋಜನೆ ಹಳ್ಳ ಹಿಡಿದಿದ್ದು, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು (ಇಒ) ತಕ್ಷಣವೇ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ತನಿಖೆ ನಡೆಸಬೇಕೆಂದು ದಾರೋಳಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.
